Sunday, 18th August 2019

ಆಗಿದ್ದನ್ನ ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ

ಧಾರವಾಡ: ಆಗಿದ್ದನ್ನು ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಹೇಳಿದ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನವಲಗುಂದ ತಾಲೂಕು ಶಲವಡಿ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ ಚಿಗರಿ ಕೊಲೆ ಮಾಡಿದ ಆರೋಪಿ. ಲಕ್ಷ್ಮಿ ಕೊಲೆಯಾದ ಪತ್ನಿ. ಘಟನೆಯಲ್ಲಿ ಲಕ್ಷ್ಮಿಯ ತಾಯಿ ದೇವಕ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಶ್ವನಾಥ ಚಿಗರಿ ಹಾಗೂ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಲಕ್ಷ್ಮಿ 2010ರಲ್ಲಿ ವಿವಾಹವಾಗಿದ್ದರು. ಲಕ್ಷ್ಮಿ ಹೆಚ್ಚಾಗಿ ತವರು ಮನೆಗೆ ಹೋಗುತ್ತಿದ್ದಳು. ಈ ವಿಚಾರವಾಗಿ ವಿಶ್ವನಾಥ ಲಕ್ಷ್ಮಿ ನಡುವೆ ಆಗಾಗ ಜಗಳವಾಗುತಿತ್ತು. ಅಷ್ಟೇ ಅಲ್ಲದೆ ಕಲಕೇರಿ ಗ್ರಾಮದಲ್ಲಿ ಲಕ್ಷ್ಮಿ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ವಿಶ್ವನಾಥನಲ್ಲಿ ಮೂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ವಿಶ್ವನಾಥ ಇತ್ತೀಚಿಗೆ ಕಲಕೇರಿಗೆ ಹೋಗಿದ್ದ. ಈ ವೇಳೆ ಪತ್ನಿ ಕಟ್ಟಿಗೆ ತರುವುದಾಗಿ ಹೇಳಿ ಹಳ್ಳದ ಕಡೆಗೆ ಹೋಗುತ್ತಿದ್ದಳು. ಮೊದಲೇ ಸಂಶಯ ವ್ಯಕ್ತಪಡಿಸಿದ್ದ ವಿಶ್ವನಾಥ ಆಕೆಗೆ ತಿಳಿಯದಂತೆ ಹಿಂಬಾಲಿಸಿದ್ದ. ಹಳ್ಳದ ಪೊದೆಯಲ್ಲಿ ಕಾಯುತ್ತಿದ್ದ ಪ್ರಿಯಕರನನ್ನು ಸೇರಿದ ಲಕ್ಷ್ಮಿ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದನ್ನು ದೂರದಿಂದಲೇ ನೋಡಿದ ವಿಶ್ವನಾಥ ತನ್ನ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದ ಎಂದು ದೂರಿದ್ದಾರೆ.

ಕಟ್ಟಿಗೆ ಹೊತ್ತು ಮನೆಗೆ ಬಂದ ಲಕ್ಷ್ಮಿ ಜೊತೆಗೆ ಜಗಳವಾಡಿದ ವಿಶ್ವನಾಥ, ಹಲ್ಲೆ ಮಾಡಿದ್ದ. ಬಳಿಕ ಇಬ್ಬರೂ ದೂರವಾಗಿದ್ದರೂ ಹಾಗೂ ವಿಚ್ಛೇದನಕ್ಕೆ ಮುಂದಾಗಿದ್ದರು. ಹೀಗಾಗಿ ಲಕ್ಷ್ಮಿ ಸುಮಾರು ದಿನಗಳಿಂದ ತವರು ಮನೆಯಲ್ಲಿ ಉಳಿದುಕೊಂಡಿದ್ದಳು.

ನಾನು ಮನಸ್ಸು ಬದಲಾಯಿಸಿದ್ದೇನೆ. ಆಗಿದ್ದು ಆಗಿ ಹೋಯಿತು. ಇಬ್ಬರೂ ಕೂಡಿ ಬದುಕೋಣ ಎಂದು ವಿಶ್ವನಾಥ ಪತ್ನಿ ಲಕ್ಷ್ಮಿಗೆ ಕೇಳಿಕೊಂಡಿದ್ದ. ಅಷ್ಟೇ ಅಲ್ಲದೆ ಬುಧವಾರ ಕಲಕೇರಿಗೆ ಹೋಗಿ ಪತ್ನಿಯನ್ನು ಶಲವಡಿಗೆ ಕರೆದುಕೊಂಡು ಬಂದಿದ್ದ. ಮಗಳಿಗೆ ಏನಾದರೂ ಮಾಡಿದರೆ ಎಂಬ ಭಯದಿಂದ ದೇವಕ್ಕ ಕೂಡ ಲಕ್ಷ್ಮಿಯ ಜೊತೆಗೆ ಬಂದಿದ್ದರು.

ಲಕ್ಷ್ಮಿ ಬುಧವಾರ ರಾತ್ರಿ 10:30ಕ್ಕೆ ಊಟ ಮಾಡಿ ಮಲಗಿದ್ದಳು. ಈ ವೇಳೆ ಹೊರಗಿನಿಂದ ಕಂದಲಿ ಹಿಡಿದು ಬಂದ ವಿಶ್ವನಾಥ ಲಕ್ಷ್ಮಿಯ ಕಣ್ಣಿಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಲಕ್ಷ್ಮಿ ಮನೆಯಿಂದ ಹೊರ ಬಂದಿದ್ದಾಳೆ. ಅಷ್ಟಕ್ಕೆ ಬಿಡದ ವಿಶ್ವನಾಥ ಲಕ್ಷ್ಮಿಯ ಕುತ್ತಿಗೆ, ಕೈಗೆ ಹೊಡೆದಿದ್ದಾನೆ. ಈ ವೇಳೆ ಮಗಳನ್ನು ರಕ್ಷಿಸಲು ಬಂದಿದ್ದ ದೇವಕ್ಕನ ಮೇಲೆ ಹಲ್ಲೆ ಮಾಡಿದ್ದಾನೆ.

ಗಲಾಟೆಯನ್ನು ಕೇಳಿಸಿಕೊಂಡ ನೆರೆಮನೆಯವನ್ನು ಹೊರಗೆ ಬಂದು ಲಕ್ಷ್ಮಿ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದನ್ನು ನೋಡಿ, ಪೊಲೀಸರಿಗೆ ಹಾಗೂ ಅಂಬುಲನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಲಕ್ಷ್ಮಿ ಹಾಗೂ ದೇವಕ್ಕರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಲಕ್ಷ್ಮಿ ಮೃತಪಟ್ಟಿದ್ದಾಳೆ. ದೇವಕ್ಕಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ವಿಶ್ವನಾಥ ವಿರುದ್ಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *