Connect with us

Crime

ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

Published

on

– ಸ್ನೇಹಿತನಿಂದ್ಲೇ ಬ್ಯಾಂಕ್ ಅಧಿಕಾರಿಯ ಕಗ್ಗೊಲೆ
– ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

ಮುಂಬೈ: ಬ್ಯಾಂಕ್ ಅಧಿಕಾರಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು ಬಳಿಕ 12 ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ ವಿಲಕ್ಷಣ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಶೀಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತ ಚಾಲ್ರ್ಸ್ ನಡಾರ್(41) ಹಾಗೂ ಆತನ ಪತ್ನಿ ಸಲೋಮಿ(31)ಯನ್ನು ಬಂಧಿಸಲಾಗಿದೆ.

ರಾಯ್‍ಗಢ ಜಿಲ್ಲೆಯ ನುಲ್ಹಾ ಸಮೀಪದ ರೈಲ್ವೇ ನಿಲ್ದಾಣದ ಬಳಿ ಸುಶೀಲ್ ಮೃತದೇಹ ದೊರಕಿದೆ. ಎರಡು ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಬಿಸಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿಯಾಗಿರುವ ಸುಶೀಲ್, ಡಿಸೆಂಬರ್ 12ರಿಂದ ಗಾಂದಿನಗರದಲ್ಲಿರುವ ತಕ್ಷಶಿಲಾ ಕಟ್ಟಡದಿಂದ ನಾಪತ್ತೆಯಾಗಿದ್ದನು.

ನಾನು ಕಚೇರಿಯ ಸಹೋದ್ಯೋಗಿಗಳ ಜೊತೆ ಟ್ರಿಪ್ ಗೆ ಹೋಗುತ್ತಿದ್ದೇನೆ. ಭಾನುವಾರ ಸಂಜೆ ವಾಪಸ್ ಬರುವುದಾಗಿ ಸುಶೀಲ್ ತನ್ನ ತಾಯಿಯ ಬಳಿ ಹೇಳಿ ಹೋಗಿದ್ದಾನೆ. ಆದರೆ ಮಗ ಮನೆಗೆ ವಾಪಸ್ ಬರದೇ ಇರುವುದರಿಂದ ಆತಂಕಗೊಂಡ ತಾಯಿ, ಸೋಮವಾರದಿಂದ ಮಗನನ್ನು ಹುಡುಕಲು ಆರಂಭಿಸಿದ್ದಾರೆ. ಮಗ ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಬಳಿಯೂ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸುಶೀಲ್ ಎಲ್ಲಿದ್ದಾನೆ ಎಂಬ ಬಗ್ಗೆ ಕಚೇರಿಯಲ್ಲಿದ್ದ ಸಿಬ್ಬಂದಿಗೂ ತಿಳಿಯದಾಗಿತ್ತು. ಹೀಗಾಗಿ ಕೊನೆಗೆ ತಾಯಿ ಡಿಸೆಂಬರ್ 14ರಂದು ವೊರ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಯಿ ನೀಡಿದ ದೂರು ಸ್ವೀಕರಿಸಿ ಪೊಲೀಸರು ಸುಶೀಲ್ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಪೊಲೀಸರಿಗೆ ಗುರುವಾರ ಬೆಳಗ್ಗೆ ಸುಶೀಲ್ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸುಶೀಲ್ ಪೋಷಕರನ್ನು ಕರೆಸಿದ್ದಾರೆ. ಅಂತೆಯೇ ಶವ ತಮ್ಮ ಮಗನದ್ದು ಎಂದು ಗುರುತು ಹಿಡಿದರು.

ಇತ್ತ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಬುಧವಾರ ಎರಡು ಸೂಟ್ ಕೇಸ್ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸೂಟ್ ಕೇಸ್ ತೆರೆದು ನೋಡಿದಾಗ ಅದರಲ್ಲಿ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೂಟ್ ಕೇಸ್ ಮೇಲಿದ್ದ ಸ್ಟಿಕ್ಕರ್ ಮೂಲಕ ಇಡೀ ಪ್ರಕರಣವನ್ನು ಭೇದಿಸುವ ಪ್ರಯತ್ನ ಮಾಡಿದೆವು. ಸ್ಟಿಕ್ಕರ್ ಸಹಾಯದಿಂದ ಸೂಟ್ ಕೇಸ್ ಮಾರಾಟ ಮಾಡಿದವನ ಬಳಿ ಹೋದೆವು. ಆಗ ಆತ ಹೌದು ತನ್ನ ಅಂಗಡಿಯಿಂದಲೇ ಈ ಸೂಟ್ ಕೇಸ್ ಖರೀದಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮುಂದಿನ ತನಿಖೆಗೆ ಸಹಾಯ ಕೂಡ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಶವ ಸಿಕ್ಕ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸ್ನೇಹಿತ ನಡಾರ್ ನನ್ನು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ನಡಾರ್ ಹಾಗೂ ಆತನ ಪತ್ನಿ ನೆರಲ್ ನಲ್ಲಿರುವ ನಿವಾಸದಿಂದ ಏನನ್ನೋ ಎತ್ತಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.

ಮುಂಬೈನ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಶೀಲ್ ಹಾಗೂ ಸಲೋಮಿ ಪರಿಚಯವಾಗಿದೆ. ಡಿಸೆಂಬರ್ 12ರಂದು ರಾತ್ರಿ ಸುಶೀಲ್ ನಡಾರ್ ಮನೆಗೆ ಬಂದಿದ್ದಾನೆ. ಅಲ್ಲದೆ ಈ ವೇಳೆ ನಡಾರ್ ಪತ್ನಿಯ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾನೆ. ಈ ಸಿಟ್ಟಿನಿಂದಲೇ ಪತಿ ಹಾಗೂ ಪತ್ನಿ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ದೇಹವನ್ನು 12 ಪೀಸ್ ಗಳನ್ನಾಗಿ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಗುರುವಾರ ರಾತ್ರಿ ಬಿಸಾಕಿದ್ದಾರೆ. ಮೃತದೇಹದಲ್ಲಿ ಬಲಕೈ ಮಿಸ್ ಆಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಈ ಇಬ್ಬರನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in