Connect with us

Districts

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪ್ರವಾಹಕ್ಕೆ ಸಿಲುಕಿದ್ದ ಅನಾಥ ವೃದ್ಧೆಯ ರಕ್ಷಣೆ

Published

on

ಗದಗ: ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಕಣ್ಣೀರಿಡುತ್ತಿದ್ದ ಅನಾಥ ವೃದ್ಧೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ.

ಪ್ರವಾಹಕ್ಕೆ ಸಿಲುಕಿ ಅಜ್ಜಿ ಕಣ್ಣೀರು ಹಾಕುತ್ತಿರುವ ವಿಚಾರವನ್ನು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಗೌಡ ಕೆಂಚನಗೌಡ ಅವರು ಅಜ್ಜಿಯನ್ನು ರಕ್ಷಣೆ ಮಾಡಿದ್ದಾರೆ. ಈ ಮೂಲಕ ‘ಪಬ್ಲಿಕ್’ ನಲ್ಲಿ ನೊಂದ ಸಂತ್ರಸ್ತೆ ಅಜ್ಜಿಯ ಕರುಣಾಜನಕ ಕಥೆ ಸುಖಾಂತ್ಯ ಕಂಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಹೆಚ್ಚುತ್ತಿದ್ದು, ನದಿ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಲವು ಸೇತುವೆಗಳು ಮುಳುಗಡೆಯಾಗಿವೆ. ಕೆಲ ಗ್ರಾಮಗಳನ್ನು ಸಹ ಸ್ಥಳಾಂತರಿಸಲಾಗುತ್ತಿದೆ. ಈ ಮಧ್ಯೆ ಜಿಲ್ಲೆಯ ಕೊಣ್ಣೂರ ಗ್ರಾಮದ 85 ವರ್ಷದ ಅಜ್ಜಿ ಶಿವನಮ್ಮ ವಾಲಿ ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಕಣ್ಣೀರಿಟ್ಟಿದ್ದರು.

ಸಂಪರ್ಕ ಕಡಿತವಾಗಿರುವುದರಿಂದ ಎರಡು ದಿನಗಳಿಂದ ಊಟ ಉಪಹಾರವಿಲ್ಲದೆ ಅಜ್ಜಿ ಪರದಾಡಿದ್ದರು. ಈ ವಿಚಾರವನ್ನು ಪಬ್ಲಿಕ್ ಟಿವಿ ಬಳಿ ಅಜ್ಜಿ ಅಳಲು ತೋಡಿಕೊಂಡಿದ್ದರು. ಪತಿ, ಮಕ್ಕಳು ಯಾರೂ ಇಲ್ಲದಕ್ಕೆ ಎಲ್ಲೂ ಹೋಗಲು ಸಾಧ್ಯವಾಗದೆ ಪ್ರವಾಹದಲ್ಲಿ ಸಿಲುಕಿದ್ದರು. ನೀರಿನೊಂದಿಗೆ ಶಿವನ ಪಾದ ಸೇರುತ್ತೇನೆ ಎಂದು ಶಿವನಮ್ಮ ಕಣ್ಣೀರು ಹಾಕಿದ್ದರು.

ಮೂರು ಅಡಿ ಆಳದ ನೀರಲ್ಲಿ ಸಹಾಯಕ್ಕಾಗಿ ಅಜ್ಜಿ ಬಕಪಕ್ಷಿಯಂತೆ ಕಾಯುತ್ತಿದ್ದರು. ನಡೆಯಲು ಬಾರದೆ, ಎಲ್ಲೂ ಹೋಗಲು ಆಗದೆ ನೀರಲ್ಲೇ ಕಾಲ ಕಳೆಯುತ್ತಿದ್ದ ವಿಚಾರವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು.

Click to comment

Leave a Reply

Your email address will not be published. Required fields are marked *