Thursday, 17th October 2019

ಉಚಿತ ಆಟೋ ಅಂಬುಲೆನ್ಸ್ – 76ನೇ ವಯಸ್ಸಿನಲ್ಲೂ ಚಾಲಕನಾಗಿ ಸೇವೆ

ನವದೆಹಲಿ: 76 ವರ್ಷದ ವ್ಯಕ್ತಿಯೊಬ್ಬರು ‘ಉಚಿತ ಆಟೋ ಅಂಬುಲೆನ್ಸ್’ ಚಲಾಯಿಸುವ ಮೂಲಕ ಎಲ್ಲರ ಮನ ಗೆದಿದ್ದಾರೆ.

ದೆಹಲಿಯ ಮಾಜಿ ಟ್ರಾಫಿಕ್ ವಾರ್ಡನ್ ಆಗಿ ನಿವೃತ್ತಿಗೊಂಡಿರುವ ಹರ್ಜಿಂದರ್ ಸಿಂಗ್ ತಮ್ಮ ಆಟೋವನ್ನು ಉಚಿತ ಅಂಬುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಅಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಜನರಿಗೆ ಉಚಿತವಾಗಿ ನೆರವು ನೀಡಲು ಅವರು ಆಟೋ ಅಂಬುಲೆನ್ಸ್ ನಡೆಸುತ್ತಿದ್ದಾರೆ. ಹರ್ಜಿಂದರ್ ತಮ್ಮ ಆಟೋ ಅಂಬುಲೆನ್ಸ್ ನಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಉಚಿತವಾಗಿ ಕರೆದುಕೊಂಡು ಹೋಗುವುದಲ್ಲದೇ, ತುರ್ತು ಸಂದರ್ಭಗಳಲ್ಲಿ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡವರಿಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತಾರೆ.

ಯಾವುದೇ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡರೆ, ಹಾಗೂ ನಾನು ಅಲ್ಲಿ ಹಾಜರಿದ್ದರೆ, ನಾನು ಅವರ ಜೀವ ಉಳಿಯಲಿ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಪ್ರತಿದಿನ ಅಪಘಾತದಲ್ಲಿ ಗಾಯಗೊಂಡ ಒಬ್ಬ ವ್ಯಕ್ತಿಗೆ ನಾನು ಸಹಾಯ ಮಾಡುತ್ತೇನೆ. ಟ್ರಾಫಿಕ್ ವಾರ್ಡನ್ ಆಗಿದ್ದಾಗ ನಾನು ಅಪಘಾತದಲ್ಲಿ ಗಾಯಗೊಂಡವರನ್ನು ನೋಡಿದ್ದೇನೆ. ಆಗ ಅವರಿಗೆ ಸಹಾಯ ಮಾಡಬೇಕು ಎಂದು ಅನಿಸುತಿತ್ತು. ಆಟೋ ಖರೀದಿಸಿದ ನಂತರ ನಾನು ಸಹಾಯ ಮಾಡಬೇಕು ಎಂದುಕೊಂಡೆ. ನನ್ನ ಕೆಲಸದ ಸಮಯ ಮುಗಿದ ನಂತರ ನಾನು ಅಪಘಾತ ಪ್ರದೇಶದಲ್ಲಿ ತಿರುಗಾಡುತ್ತೇನೆ ಎಂದರು.

ಮೊದಲು ನನ್ನ ಆಟೋದಲ್ಲಿ ಮಾತ್ರೆಗಳ ಬಾಕ್ಸ್ ಇರಲಿಲ್ಲ ಹಾಗೂ ಪ್ರಥಮ ಚಿಕಿತ್ಸೆ ಹೇಗೆ ನೀಡಲಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ಯಾವ ಔಷಧಿ ಬಳಸಬಹುದು ಎಂದು ಕಂಡುಹಿಡಿಯಲು ನಾನು ಒಂದು ಸಣ್ಣ ಕೋರ್ಸ್ ಮಾಡಿದೆ. ಈಗ ನಾನು ಡಯಾಬಿಟಿಸ್ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದ್ದೇನೆ. ಯಾರಿಗಾದರೂ ಸಹಾಯ ಮಾಡುವುದಕ್ಕಿಂತ ಉತ್ತಮವಾದ ಭಾವನೆ ಇಲ್ಲ ಎಂದು ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಸಹಾಯ ಸಿಗದ ಕಾರಣ ರಸ್ತೆ ಅಪಘಾತದಲ್ಲಿ ಜನ ಬಲಿಯಾಗುತ್ತಾರೆ. ಈ ವೇಳೆ ಅಲ್ಲಿರುವ ಜನರು ಸಹಾಯ ಮಾಡದೇ ಸುಮ್ಮನೆ ನಿಂತು ನೋಡುತ್ತಾರೆ. ನಾನು ಅವರಲ್ಲಿ ಒಬ್ಬನಾಗಲು ಇಷ್ಟಪಡುವುದಿಲ್ಲ ಎಂದು ಹರ್ಜಿಂದರ್ ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *