Wednesday, 29th January 2020

ಪತ್ನಿಗೆ ಬೆಂಕಿ ಹಚ್ಚಿ ತಾನೂ ವಿಷ ಸೇವಿಸಿದ 70ರ ವೃದ್ಧ!

ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ 32 ಗುಂಟೆ ಜಮೀನನ್ನು ಕಳೆದ ವರ್ಷ ಮಾರಾಟ ಮಾಡಿದ್ದರು. ಈ ಬಗ್ಗೆ ಮಗ ಹಾಗೂ ಮಗಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇತ್ತ ಜಾಗ ಮಾರಿ ಹೋಗಿದ್ದ ನಾರಾಯಣಪ್ಪನ ಕೈಯಲ್ಲಿ ಹಣ ಖಾಲಿಯಾದ ಬಳಿಕ ಮತ್ತೆ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು. ಈ ವೇಳೆ ಪತ್ನಿ, ಮಕ್ಕಳು ಸೇರಿ ನಾರಾಯಣಪ್ಪ ಅವರನ್ನು ಮನೆಯೊಳಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಅವರು ಅದೇ ಗ್ರಾಮದಲ್ಲಿರುವ ತಮ್ಮ ಅಣ್ಣನ ಮನೆಯಲ್ಲಿ ನಾರಾಯಣಪ್ಪ ವಾಸಿಸುತ್ತಿದ್ದರು.

15 ದಿನಗಳ ಬಳಿಕ ಮತ್ತೆ ತನ್ನ ಮನೆಯತ್ತ ಬಂದ ನಾರಾಯಣಪ್ಪ, ನಿನ್ನ ಮಕ್ಕಳಲ್ಲಿ ಕೇಸ್ ಹಿಂತೆಗೆದುಕೊಳ್ಳಲು ಹೇಳು. ಇಲ್ಲವೆಂದಲ್ಲಿ ಕೊಲ್ಲುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳು ತನ್ನ ಕೇಸ್ ಹಾಕಲು ಪತ್ನಿಯೂ ಬೆಂಬಲ ನೀಡಿದ್ದಾಳೆ ಎಂದು ನಾರಾಯಣಪ್ಪಗೆ ಸಂಶಯ ಮೂಡಿತ್ತು. ಇದೇ ಸಿಟ್ಟಿನಲ್ಲಿ ನಾರಾಯಣಪ್ಪ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ಹಾಲ್ ನಲ್ಲಿ ಮಲಗಿದ್ದ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು, ಆಕೆ ಓಡಿ ಹೋಗುವ ಮುಂಚೆ ಬೆಂಕಿ ಹಚ್ಚಿದ್ದಾರೆ.

ಪರಿಣಾಮ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮಮ್ಮ ಮಗಳು ಮತ್ತು ಸೊಸೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಗಾಢ ನಿದ್ದೆಯಲ್ಲಿದ್ದ ಅವರಿಗೆ ಈ ವಿಚಾರ ಆ ಕೂಡಲೇ ತಿಳಿಯಲಿಲ್ಲ.

ಇತ್ತ ಪತ್ನಿಯನ್ನು ಸಾಯಿಸಿದ ನಾರಾಯಣಪ್ಪ ತಾನೂ ವಿಷ ಸೇವಿಸಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *