ಜೋರ್ಡಾನ್‌ ಚರ್ಚ್‌ನಲ್ಲಿ ಗುಂಡಿನ ದಾಳಿ – 7 ಮಂದಿ ಸಾವು, 34 ಮಂದಿಗೆ ಗಾಯ

2 Min Read

ಅಮ್ಮನ್: ಜೋರ್ಡಾನ್‌ನ (Jordan) ಕರಾಕ್ ಗವರ್ನರೇಟ್‌ನಲ್ಲಿರುವ ಚರ್ಚ್‌ವೊಂದರಲ್ಲಿ (Church) ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ 34 ಮಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಗಳು ದಾಳಿಕೋರರಿಗಾಗಿ ಶೋಧ ಕಾರ್ಯ ನಡೆಸುತ್ತಿವೆ. ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಜೋರ್ಡಾನ್‌ನ ರಾಜ ಅಬ್ದುಲ್ಲಾ ಅವರು ತಿಳಿಸಿದ್ದಾರೆ. ಗಾಯಗೊಂಡವರ ಪೈಕಿ 27 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ‘ಅಲ್-ಮಮ್ಲಕಾ’ (Al-Mamlaka) ದೂರದರ್ಶನ ವಾಹಿನಿ ವರದಿ ಮಾಡಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್ – ವಡೋದರಾದಲ್ಲಿ ಮತೋರ್ವ ಆರೋಪಿ ಅರೆಸ್ಟ್

ಹಮೌದ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿದ್ದಾಗ, ವಾಹನವೊಂದರಿಂದ ಇಳಿದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಬಳಿಕ ಚರ್ಚ್ ಬಳಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಶಂಕಿತರನ್ನು ಬೆನ್ನಟ್ಟಲಾಗುತ್ತಿದೆ.

‘ಅಲ್-ಮಮ್ಲಕಾ’ ಪ್ರಸಾರ ಮಾಡಿದ ವಿಡಿಯೋವೊಂದರಲ್ಲಿ, ಮೂವರು ವ್ಯಕ್ತಿಗಳು ಫುಟ್‌ಪಾತ್‌ನಿಂದ ಚರ್ಚ್‌ನತ್ತ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ನಂತರ ಚರ್ಚ್‌ನ ಪ್ರವೇಶದ್ವಾರದ ಕಡೆಗೆ ಓಡಿಹೋಗುವುದು ದೃಶ್ಯದಲ್ಲಿ ಸೆರೆಯಾಗಿದೆ.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಖಾಲಿದ್ ಬುರ್ಖಾನ್ ಎಂಬವರು ಈ ಬಗ್ಗೆ ಮಾಹಿತಿ ನೀಡಿ, ಚರ್ಚ್‌ ಬಳಿ ಹಲವಾರು ಜನ ಸೇರಿದ್ದರು. ಈ ವೇಳೆ ಕನಿಷ್ಠ ಇಬ್ಬರು ದುಷ್ಕರ್ಮಿಗಳು, ಒಬ್ಬ ರೈಫಲ್ ಮತ್ತು ಇನ್ನೊಬ್ಬ ಪಿಸ್ತೂಲ್ ಹಿಡಿದುಕೊಂಡು ಹಲವು ನಿಮಿಷಗಳ ಕಾಲ ಗುಂಡಿನ ದಾಳಿ ನಡೆಸಿದರು ಎಂದು ಘಟನೆಯನ್ನು ವಿವರಿಸಿದರು.

ಈ ದಾಳಿಯ ಹೊಣೆಯನ್ನು ಯಾರೂ ತಕ್ಷಣಕ್ಕೆ ಹೊತ್ತುಕೊಂಡಿಲ್ಲ. ಈ ದಾಳಿಗೆ ಯಾರು ಕಾರಣ ಎಂಬುದರ ಕುರಿತು ಜೋರ್ಡಾನ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.

ಜೋರ್ಡಾನ್‌ನಲ್ಲಿ ಇಂತಹ ದಾಳಿಗಳು ಅತ್ಯಂತ ಅಪರೂಪವಾಗಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮಿಸ್ಟ್ ಉಗ್ರಗಾಮಿಗಳು ನಡೆಸಿದ ದಾಳಿಯ ಪ್ರಯತ್ನಗಳನ್ನು ಜೋರ್ಡಾನ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ದಾಳಿಗಳು ಆರಂಭವಾದ ಬಳಿಕ ಜೋರ್ಡಾನ್ ಇರಾನಿನ ದಾಳಿಗೆ ಗುರಿಯಾಗುತ್ತಿದೆ.

ಜೋರ್ಡಾನ್‌ನಲ್ಲಿ ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರಾಗಿದ್ದಾರೆ. ಈ ದೇಶದಲ್ಲಿ ಪ್ರಪಂಚದಾದ್ಯಂತದ ಕ್ರಿಶ್ಚಿಯನ್ ಯಾತ್ರಿಕರನ್ನು ಆಕರ್ಷಿಸುವ ಹಲವಾರು ತಾಣಗಳಿವೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ ಕೇಸ್ – ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರು ಅರೆಸ್ಟ್

Share This Article
Exit mobile version