Advertisements

ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ – ‘ನೀಲಿಯಾಗುತ್ತಿವೆ ಭಕ್ತರ ಕಣ್ಣುಗಳು’

– ವಿಷದ ಶಂಕೆ ವ್ಯಕ್ತಪಡಿಸಿದ ಕೊಳ್ಳೇಗಾಲ ಡಿಎಚ್‍ಓ
– ಸಾವಿನ ಸಂಖ್ಯೆ 7ಕ್ಕೆ ಏರಿಕೆ
– ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಾಲಯದಲ್ಲಿ ದುರಂತ
– ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಸಾದ ಸೇವನೆ

ಚಾಮರಾಜನಗರ/ ಮೈಸೂರು: ಕೆಲವು ದುಷ್ಕರ್ಮಿಗಳು ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಬೆರೆಸಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಹನೂರು ತಾಲೂಕಿನ ಸುಲ್ವಾಡಿ ಗ್ರಾಮಸ್ಥರು ದೂರಿದ್ದಾರೆ.

Advertisements

ಆಸ್ಪತ್ರೆಗೆ ದಾಖಲಾಗಿರವ ಅನೇಕರ ಕಣ್ಣುಗಳು ನೀಲಿ ಆಗುತ್ತಿವೆ. ಈ ಮೂಲಕ ಆಹಾರಕ್ಕೆ ವಿಷ ಮಿಶ್ರಣ ಮಾಡಿರುವ ಸಾಧ್ಯತೆ ಇದೆ ಎಂದು ಕೊಳ್ಳೇಗಾಲ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. ನಮಗೆ ಪ್ರಸಾದದಲ್ಲಿ ರಾಸಾಯನಿಕ ರೀತಿಯ ವಾಸನೆ ಬಂದಿತ್ತು. ಸ್ವಲ್ಪ ತಿಂದು ಚೆಲ್ಲಿದೆವು. ಆದರೂ ನಮ್ಮ ಮೇಲೆ ಪರಿಣಾಮ ಬೀರಿದೆ. ನಮ್ಮ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದವರು ಕೂಡ ಅಸ್ವಸ್ಥರಾಗಿದ್ದಾರೆ ಎಂದು ಕೊಳ್ಳೆಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯೊಬ್ಬರು ತಿಳಿಸಿದ್ದಾರೆ.

Advertisements

ಮೈಸೂರಿಗೆ ಅಸ್ವಸ್ಥರು ಶಿಫ್ಟ್:
ಖಾಸಗಿ ಹಾಗೂ ವಿವಿಧ ಆಸ್ಪತ್ರೆಗಳ ಅಂಬುಲೆನ್ಸ್ ಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ 30ರಿಂದ 40 ನಿಮಿಷದಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿದೆ. ಈಗಾಗಲೇ 7 ಮಂದಿ ಮೃತಪಟ್ಟಿದ್ದು, 80 ಜನರು ಅಸ್ವಸ್ಥಗೊಂಡಿದ್ದಾರೆ. 9 ಜನರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆ ಸಾಗಿಸಲಾಗಿದ್ದು, ಆರು ಜನರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

50ಕ್ಕೂ ಹೆಚ್ಚು ಜನರು ಕೊಳ್ಳೇಗಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ ಪ್ರಸಾದ ಸೇವಿಸಿ ಮನೆಗೆ ಹೋಗಿದ್ದ ಅನೇಕರು ಅಸ್ವಸ್ಥಗೊಂಡು, ಒಬ್ಬೊಬ್ಬರಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisements

ನಡೆದಿದ್ದು ಏನು?
ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಗೋಪುರದ ಶಂಕುಸ್ಥಾಪನೆ ಇಂದು ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಆಂಬುಲೆನ್ಸ್ ನಲ್ಲಿ ಅಸ್ವಸ್ಥಗೊಂಡ ಜನರನ್ನು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವಸ್ಥಾನದ ಅರ್ಚಕ, ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಮೂವರು ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಹನೂರು ಶಾಸಕ ನಾಗೇಂದ್ರ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಹೆಚ್ಚಾಗಿ ದೇವಸ್ಥಾನ ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿ ಸೇರಿದ್ದರು. ರೈಸ್‍ಬಾತ್ ಅನ್ನು ಲ್ಯಾಬ್‍ಗೆ ಕಳುಹಿಸಿ ಪರೀಕ್ಷೆ ಮಾಡುವಂತೆ ತಿಳಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

https://www.youtube.com/watch?v=zFnWjIpKhQc

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Exit mobile version