Connect with us

Latest

ಮಹಾರಾಷ್ಟ್ರದಲ್ಲಿ ಶೇ.60.05, ಹರ್ಯಾಣ ಶೇ.65ರಷ್ಟು ಮತದಾನ

Published

on

ನವದೆಹಲಿ: ಇಂದು ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.60.05 ಮತ್ತು ಹರ್ಯಾಣದಲ್ಲಿ ಶೇ.65 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದ 288, ಹರ್ಯಾಣದ 90 ಮತ್ತು ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಬಹುತೇಕ ಎಲ್ಲ ಕಡೆಯೂ ಶಾಂತಿಯುತ ಮತದಾನವಾಗಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಸಂಜೆ ಆರು ಗಂಟೆಗೆ ಒಟ್ಟು ಶೇ.60.05 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ ಮತ್ತು ಕಾಂಗ್ರೆಸ್,ಎನ್‍ಸಿಪಿ ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದೆ.

ದೇಶದ ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದು ಉಪ ಚುನಾವಣೆ ನಡೆದಿದೆ. ಗುಜರಾತ-6, ಅಸ್ಸಾಂ-4, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಎರಡು, ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆದಿದೆ. ಪಂಜಾಬ್-4, ಕೇರಳ-5, ಸಿಕ್ಕಿಂ-3, ರಾಜಸ್ಥಾನ-2, ಮಧ್ಯ ಪ್ರದೇಶ, ಓಡಿಸ್ಸಾ, ಛತ್ತೀಸಗಢ, ಪುದುಚೇರಿ, ಮೇಘಾಲಯ ಮತ್ತು ತೆಲಂಗಾಣದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

ಪುಣೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತದಾನದ ಹಕ್ಕನ್ನು ಚಲಾಯಿಸಿದರು. ಮುಂಬೈನಲ್ಲಿ ಬಾಲಿವುಡ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚಬ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಬಹುತೇಕ ಗಣ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಚುನಾವಣೆ ನಡೆದಿದ್ದು, ಸಂಜೆ 6ಗಂಟೆವರೆಗೆ ಶೇ.65ರಷ್ಟು ಮತದಾನವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯನ್ ನ್ಯಾಶನಲ್ ಲೋಕ್ ದಳದಿಂದ ಬೇರೆಯಾಗಿರುವ ಜೆಜೆಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ. ಒಂದು ಹರ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.