Connect with us

Chitradurga

ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ 6 ಮನೆಗಳಿಗೆ ಹಾನಿ

Published

on

ಚಿತ್ರದುರ್ಗ: ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ 6 ಮನೆಗಳು ಹಾನಿಗೀಡಾದ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟ ಗ್ರಾಮದಲ್ಲಿ ನಡೆದಿದೆ.

ರಂಗಪ್ಪ ಎಂಬವರ ಮೇಲೆ ಶೀಟ್ ಬಿದ್ದು ಗಾಯವಾಗಿದೆ. ರಾತ್ರಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿಯ ಶೀಟು ಕುಸಿದಿದೆ. ಅಲ್ಲದೆ ರಂಗಪ್ಪ ಅವರ ಮೇಲೆ ಕಬ್ಬಿಣದ ತುಂಡು ಬಿದ್ದು ಗಾಯಗೊಂಡಿದ್ದಾರೆ. ರಾತ್ರಿ ಬೀಸಿದ ಬಿರುಗಾಳಿಗೆ ನಾಗರಾಜಪ್ಪ, ಗೀತಮ್ಮ, ಗೋವಿಂದಪ್ಪ, ರಂಗಪ್ಪ, ಕರಿಯಮ್ಮ, ರೇಣುಕಮ್ಮ ಎಂಬವರ ಮನೆಗಳಿಗೂ ಹಾನಿ ಆಗಿದೆ.

ಮನೆಯ ಶೀಟ್‍ಗಳು ಹಾರಿ ಹೋದ ಕಾರಣ ಸಂತ್ರಸ್ತ ಕುಟುಂಬಗಳು ರಾತ್ರಿಯಿಡೀ ಪರದಾಡಿದ್ದಾರೆ. ಅಷ್ಟೇ ಅಲ್ಲದೇ ಬಿರುಗಾಳಿ, ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಸಂತ್ರಸ್ತರು ಪರದಾಡಿದ್ದಾರೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದು ಎರಡು ದಿನದಿಂದ ವರ್ಷದ ಮಳೆ ಆರಂಭವಾಗಿದ್ದು, ಭಾನುವಾರ ಸಂಜೆ ಮೈಸೂರು ಮತ್ತು ನೆಲಮಂಗಲದಲ್ಲಿ ಬಿರುಗಾಳಿ ಸಹಿತ ವರುಣನ ಆರ್ಭಟವಾಗಿದೆ. ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲೂ ಹದವಾದ ಮಳೆಯಾಗಿತ್ತು. ಈಗ ಮೈಸೂರಿನಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಭೂಮಿಗೆ ವರುಣ ತಂಪೆರೆದಿದ್ದಾನೆ. ಮೊದಲ ಮಳೆಗೆ ಮೈಸೂರಿಗರು ಹರ್ಷಿತರಾಗಿದ್ದಾರೆ. ಆದರೆ ವರ್ಷದ ಮೊದಲ ಮಳೆಗೆ ಮರ ಧರೆಗುರುಳಿದಿದ್ದು, ಕಾರು ಜಖಂ ಆಗಿದೆ.

ಮಳೆ ಗಾಳಿಯ ಅಬ್ಬರಕ್ಕೆ ಧರೆಗೆ ಶಂಕರ ಮಠದ ಮುಂಭಾಗದ ರಸ್ತೆಯಲ್ಲಿ ಮಾವಿನ ಮರ ಧರೆಗುರುಳಿದ ಪರಿಣಾಮ ಕಾರು ಜಖಂ ಆಗಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಇತ್ತ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮುದ್ದಲಿಂಗನಹಳ್ಳಿ ಭಾಗದಲ್ಲಿ ಅಕಾಲಿಕ ಮಳೆಯಾಗಿದ್ದು, ಬಿರುಗಾಳಿ ಸಹಿತ ವರುಣನ ಆರ್ಭಟ ಮಾಡಿದ್ದಾನೆ. ಅಕಾಲಿಕ ಮಳೆ ದ್ವಿಚಕ್ರ ವಾಹನ ಸವಾರರ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv