Bengaluru City
57ನೇ ವಯಸ್ಸಿನಲ್ಲೂ ಶಿವಣ್ಣ ಫಿಟ್ ಆ್ಯಂಡ್ ಫೈನ್- ವರ್ಕೌಟ್ ವಿಡಿಯೋ ವೈರಲ್

ಬೆಂಗಳೂರು: ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜಿಮ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಶಿವಣ್ಣ ಎಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಅವರ ಎನರ್ಜಿ ಮತ್ತು ಡ್ಯಾನ್ಸ್. ಶಿವರಾಜ್ ಕುಮಾರ್ ಅವರಿಗೆ ವಯಸ್ಸು 57 ಆದರೂ ಅವರು ಈಗಲೂ ಯುವಕರನ್ನು ನಾಚಿಸುವಷ್ಟು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಈಗ ಅವರು ಮನೆಯಲ್ಲಿ ತಾಲೀಮು ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ವರ್ಕೌಟ್ ವಿಡಿಯೋವನ್ನು ಸ್ವತಃ ಶಿವಣ್ಣ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ 24 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಶಿವಣ್ಣ ಅವರು, ಮೊದಲು ಕತ್ತಿಗೆಗೆ ವ್ಯಾಯಾಮ ಮಾಡಿ ನಂತರ ತೂಕವನ್ನು ಹಿಡಿದು ಸೈಡ್ ಫ್ಯಾಟ್ಗೆ ವ್ಯಾಯಾಮ ಮಾಡುತ್ತಾರೆ. ತದನಂತರ ಮೆಷಿನ್ ಮೇಲೆ ಮಲಗಿ ಹೊಟ್ಟೆಗೆ ವರ್ಕೌಟ್ ಮಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಹಂಚಿಕೊಂಡಿರುವ ಶಿವಣ್ಣ ನಿಮ್ಮ ಶಕ್ತಿಗೂ ಮೀರಿ ನೀವು ಬಲವಾಗಿರಬೇಕು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಶಿವಣ್ಣನ ಅಭಿಮಾನಿಗಳು ಫಿದಾ ಆಗಿದ್ದು, ನೀವು ಈ ವಯಸ್ಸಿನಲ್ಲೂ ನಮಗೆ ಸ್ಫೂರ್ತಿಯಾಗುತ್ತೀರಾ ಶಿವಣ್ಣ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ನಮಗೆ ಎನರ್ಜಿ ಬೂಸ್ಟರ್ ಎಂದು ಕಮೆಂಟ್ ಮಾಡಿದ್ದಾರೆ. ಈಗ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಲಾಕ್ಡೌನ್ನಿಂದ ಮನೆಯಲ್ಲೇ ಉಳಿದಿರುವ ಶಿವಣ್ಣ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಶಿವಣ್ಣ ಸದ್ಯ ರವಿ ಆರಸು ನಿರ್ದೇಶನ ಮಾಡಿರುವ ಆರ್.ಡಿ.ಎಕ್ಸ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವ ಶಿವಣ್ಣ ನೆನ್ನೆ ನಡೆದ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದರು.
ಈ ಹಿಂದೆ ಕೂಡ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವರ್ಕೌಟ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದ್ದವು. ಪುನೀತ್ ರಾಜ್ಕುಮಾರ್ ಅವರು ಈ ಹಿಂದೆ ಎರಡು ವರ್ಕೌಟ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅಪ್ಪು ದೇಹ ದಂಡಿಸುತ್ತಿರುವುದನ್ನು ನೋಡಿದ ಅಭಿಮಾನಿಗಳು 45ರ ವಯಸ್ಸಿನಲ್ಲಿಯೂ ನಮ್ಮ ಅಪ್ಪು ಕಾಲೇಜು ಯುವಕನ ರೀತಿಯಲ್ಲಿ ಕಾಣುತ್ತಾರೆ ಎಂದು ಹಾಡಿಹೊಗಳಿದ್ದರು.
