Connect with us

Dharwad

ಕಿಮ್ಸ್‌ಗೆ 5.50 ಕೋಟಿ ರೂಪಾಯಿ ವೈದ್ಯಕೀಯ ಉಪಕರಣಗಳ ಹಸ್ತಾಂತರ

Published

on

– ಲಲಿತಕಲಾ ಅಕಾಡೆಮಿ ಸ್ಥಾಪನೆಗೆ ಕೇಂದ್ರ ಅನುಮೋದನೆ
– 6 ಪಥದ ಬೈಪಾಸ್‌ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ

ಹುಬ್ಬಳ್ಳಿ: ಭಾರತದಲ್ಲಿ ಒಟ್ಟು ಜನಸಂಖ್ಯೆ ಶೇ.19 ರಷ್ಟು ಜನರು ಖಾಸಗಿ ಆರೋಗ್ಯ ವಿಮೆ ಸೌಲಭ್ಯ ಹೊಂದಿದ್ದಾರೆ. ಭಾರತ ಸರ್ಕಾರ ಆಯುಷ್ಮಾನ್ ಆರೋಗ್ಯ ಭಾರತದಡಿ 55 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸಿದೆ. ಸರ್ಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಕಿಮ್ಸ್ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಕೋಲ್ ಇಂಡಿಯಾ ಹಾಗೂ ಐಓಸಿಎಲ್ ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ನೀಡಲಾದ 5.50 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಕಿಮ್ಸ್ ಗೆ ಹಸ್ತಾಂತರಿಸಿ ಮಾತನಾಡಿದರು.

ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ. 55 ಕೋಟಿ ಜನರಿಗೆ ಹೃದಯ ಸಂಬಂಧಿ ತೊಂದರೆಗಳಿವೆ. ಡೆಂಗ್ಯೂ ಪ್ರಮಾಣ ಹೆಚ್ಚಿದೆ. ಇದನ್ನು ಅರಿತ ಪ್ರಧಾನ ಮಂತ್ರಿಗಳು ಸ್ವಚ್ಛಭಾರತ ಆಂದೋಲನಕ್ಕೆ ಚಾಲನೆ ನೀಡಿದರು ಎಂದರು.

ಕಿಮ್ಸ್ ಗೆ ಬೇಕಾದ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಕೋಲ್ ಇಂಡಿಯಾ ಹಾಗೂ ಐಓಸಿಎಲ್ ಗೆ ಜಿಲ್ಲಾಧಿಕಾರಿ ಹಾಗೂ ಕಿಮ್ಸ್ ನಿರ್ದೇಶಕರು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಿದರು. ಇದರ ಪರಿಣಾಮವಾಗಿ ಬೇಗನೆ ಹಣ ಒದಗಿಸಿ ಉಪಕರಣ ಖರೀದಿಸಲು ಸಾಧ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ಉತ್ತಮ ಸೇವೆ ನೀಡಿ ಹೆಸರುವಾಸಿಯಾಗಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ಕಿಮ್ಸ್ ಗೆ ದಾಖಲಾದ ರೋಗಿಗಳು ನಗು ಮೊಗದಿಂದ ಹಿಂದಿರುಗಬೇಕು. ಭಾರತದಲ್ಲಿ ಕೋವಿಡ್ ಗುಣಮುಖರ ಸಂಖ್ಯೆ ಹೆಚ್ಚಿದೆ. ಪ್ರತಿದಿನ 11 ಲಕ್ಷ ಜನರಿಗೆ ಕೋವಿಡ್ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್, ಹುಬ್ಬಳ್ಳಿ ಧಾರವಾಡ ನಗರದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಸ್ಥಾಪಿಸಲು ಅನುಮೋದನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು 6 ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ. ನಂದಿ ಇನ್ ಫ್ರಾಸ್ಟಕ್ಚರ್ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, 2024 ರ ವರೆಗೆ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಪಡೆಯಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವರು. ಜನವರಿ ಮಾಹೆಯಲ್ಲಿ ಚನ್ನಮ್ಮ ವೃತ್ತದ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎನ್.ಟಿ.ಪಿ.ಸಿ.ಎಲ್.(ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್) ಅವಳಿ ನಗರದ ಕಲ್ಲಿದ್ದಲು ಆಧಾರಿತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದೆ ಬಂದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘಟಕ ಸ್ಥಾಪಿಸಲಾಗುವುದು. ಸುಸ್ಥಿರ ಅಭಿವೃದ್ಧಿ ಹೊಂದಿರುವ ಮಹಾರಾಷ್ಟ್ರದ ನಾಗಪುರ ನಗರಕ್ಕೆ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಭೇಟಿ ನೀಡಿ ಅಧ್ಯಯನ ನಡೆಸಿ, ಅವಳಿ ನಗರದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಟಾನಿ, ಪ್ರಾಂಶುಪಾಲ ಡಾ.ಎಂ.ಸಿ.ಚಂದ್ರ, ಕಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಜಿ.ಬಿ.ಸತ್ತೂರ, ಕೋಲ್ ಇಂಡಿಯಾ ಹಾಗೂ ಐಓಸಿಯಲ್ ಪ್ರತಿನಿಧಿಗಳಾದ ರಾಮೇಶ ಬಾಬು, ಗೌಸ ಭಾಷಾ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯದ ಐಓಸಿಯಲ್ ಮುಖ್ಯಸ್ಥ ಡಿ.ಎಲ್.ಪ್ರಮೋದ್ ವಿಡಿಯೋ ಸಂವಾದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

www.publictv.in