Friday, 17th August 2018

Recent News

KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

ಶಿವಮೊಗ್ಗ: ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಐದು ವರ್ಷದ ಬಾಲಕ ಬಿದ್ದು ಮೃತಪಟ್ಟ ಘಟನೆ ಜಿಲ್ಲೆ ಸಾಗರದಲ್ಲಿ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

ಶಿವಪ್ಪ ನಾಯಕ ನಗರದಲ್ಲಿರುವ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಮುನೀಂದ್ರ ಎಂಬವರ ಮಗ ಭುವನ್ (5) ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಡಿಪೋ ಕಂಪೌಂಡ್ ಕಟ್ಟಲು ಗುಂಡಿ ತಗೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ತುಂಬಿದ್ದು, ಸಮೀಪದಲ್ಲಿಯೇ ಆಟವಾಡುತ್ತಿದ್ದ ಭುವನ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾನೆ.

ತಕ್ಷಣವೇ ಅಲ್ಲಿದ್ದ ಜನರು ಬಾಲಕನನ್ನು ಮೇಲೆದ್ದಾರೆ. ನೀರು ಕುಡಿದು ಹೊಟ್ಟೆ ಭಾರವಾಗಿದ್ದ ಭುವನ್‍ಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ.

ಗುಂಡಿ ತೆಗೆದು ಸೂಚನಾ ಫಲಕ ಹಾಕುವಲ್ಲಿ ಕಾಮಗಾರಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ನನ್ನ ಮಗನ ಸಾವಿಗೆ ಅವರೇ ಕಾರಣ ಎಂದು ಗುತ್ತಿಗೆದಾರರ ವಿರುದ್ಧ ಮೃತ ಬಾಲಕನ ತಂದೆ ಮುನೀಂದ್ರ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಂಪೌಂಡ್ ನಿರ್ಮಾಣಕ್ಕೆ ಅನೇಕ ಗುಂಡಿಗಳನ್ನು ತೆಗೆಯಲಾಗಿದೆ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *