Monday, 16th December 2019

ರಾತ್ರಿ ನಿದ್ದೆಗೂ ಮುನ್ನ ಈ 5 ಬ್ಯೂಟಿ ಟ್ರಿಕ್ಸ್ ಫಾಲೋ ಮಾಡಿ ನೋಡಿ

ಸುಂದರವಾಗಿ ಕಾಣಿಸಬೇಕು ಅಂತ ಸಾಮಾನ್ಯವಾಗಿ ಎಲ್ಲರೂ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿರ್ತಾರೆ. ಆದ್ರೆ ಎಲ್ಲಾ ಟಿಪ್ಸ್ ಫಲ ಕೊಡುತ್ತದೆ ಅಂತೇನಿಲ್ಲ. ಕೆಲವೊಂದು ಮನೆಮದ್ದು ಕೆಲಸ ಮಾಡ್ಬೇಕಾದ್ರೆ ಅದನ್ನ ನಿಯಮಿತವಾಗಿ ತಿಂಗಳುಗಟ್ಟಲೆ ಪಾಲನೆ ಮಾಡಿದಾಗಲೇ ರಿಸಲ್ಟ್ ಗೊತ್ತಾಗೋದು. ಹಾಗೆ ಕೆಲವೊಂದು ಬ್ಯೂಟಿ ಟಿಪ್ಸ್ ರಾತ್ರಿ ವೇಳೆ ಪಾಲಿಸೋದ್ರಿಂದ ಬೆಳಗ್ಗೆ ಅದರ ರಿಸಲ್ಟ್ ನಿಮಗೆ ಗೊತ್ತಾಗುತ್ತೆ. ಅದೇನು ಅಂದ್ರಾ? ಇಲ್ಲಿದೆ ಆ 5 ಬ್ಯೂಟಿ ಟ್ರಿಕ್ಸ್

1. ರಾತ್ರಿ ವೇಳೆ ತಲೆಗೆ ಎಣ್ಣೆ ಹಚ್ಚಿ ಮಲಗಿ
ಆಫೀಸ್‍ಗೆ ಅಥವಾ ಕಾಲೇಜಿಗೆ ಹೋಗೋರು ತಲೆಗೆ ಎಣ್ಣೆ ಮಸಾಜ್ ಮಾಡಬೇಕಾದ್ರೆ ಅದಕ್ಕಾಗಿ ಸಮಯ ಬೇಕು. ಭಾನುವಾರ ಮಾತ್ರ ಟೈಂ ಸಿಗೋದು ಅನ್ನೋದಾದ್ರೆ ರಾತ್ರಿ ವೇಳೆ ತಲೆಗೆ ಎಣ್ಣೆ ಹಚ್ಚಬಹುದು. ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ. ನಂತರ ಕೂದಲು ಬಾಚಿ ಜಡೆ ಹೆಣೆದು ಅಥವಾ ಗಂಟು ಕಟ್ಟಿ ಶವರ್ ಕ್ಯಾಪ್ ಅಥವಾ ಪ್ಲಾಸ್ಟಿಕ್ ಕವರ್ ಹಾಕಿ ಹಾಯಾಗಿ ನಿದ್ದೆ ಮಾಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿದ್ರೆ ಹೊಳೆಯುವ ಕೂದಲು ನಿಮ್ಮದು. ಕೊಬ್ಬರಿ ಎಣ್ಣೆಗೆ ಗುಲಾಬಿ ದಳಗಳನ್ನ ಹಾಕಿ ಬಿಸಿ ಮಾಡಿ, ಅದು ಬೆಚ್ಚಗಾದ ನಂತರ ದಳಗಳನ್ನ ಚೆನ್ನಾಗಿ ಕಿವುಚಿ ತೆಗೆದು ಆ ಎಣ್ಣೆಯನ್ನ ಹಚ್ಚಿ ಬೆಳಗ್ಗೆ ಎದ್ದು ಸ್ನಾನ ಮಾಡಿದ್ರೆ ನಿಮ್ಮ ಕೂದಲು ಮೃದುವಾಗುತ್ತೆ.

2. ಪಾದದ ಬಿರುಕು ನಿವಾರಣೆಗೆ ಹೀಗೆ ಮಾಡಿ
ಚಳಿಗಾಲದಲ್ಲಿ ಹಿಮ್ಮಡಿ ಬಿರುಕಾಗೋದು ಸಾಮಾನ್ಯ. ಅದಕ್ಕಾಗಿ ವಿಶೇಷ ಆರೈಕೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಪಾದವನ್ನ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ. ನಂತರ ಬಿರುಕು ಮೂಡಿರೋ ಭಾಗಕ್ಕೆ ವ್ಯಾಸಲೀನ್ ಹಚ್ಚಿ ಸಾಕ್ಸ್ ಧರಿಸಿ ಮಲಗಿ. ಬೆಳಗ್ಗೆ ಎದ್ದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯೋದನ್ನ ಮರೀಬೇಡಿ. ಇಡೀ ಕಾಲಿಗೆ ಮಾಯ್‍ಶ್ಚರೈಸರ್ ಹಚ್ಚಿ ಸಾಕ್ಸ್ ಧರಿಸಿ ಮಲಗಿದ್ರೆ ನಿಮ್ಮ ಕಾಲು ಕೋಮಲವಾಗಿರೋದನ್ನ ಬೆಳಗ್ಗೆ ನೀವೇ ಗಮನಿಸಬಹುದು.

3. ಕಣ್ಣಿನ ಆರೈಕೆ
ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡಿದ್ದರೆ ಅಥವಾ ತುಂಬಾ ಆಯಾಸಗೊಂಡಿದ್ರೆ ರಾತ್ರಿ ಮಲಗುವಾಗ ಕಣ್ಣಿನ ಸುತ್ತ ಆಲ್ಮಂಡ್ ಆಯಿಲ್(ಬಾದಾಮಿ ಎಣ್ಣೆ) ಅಥವಾ ಆಲೋವೆರಾ ಜೆಲ್ ಹಚ್ಚಿ. ಈ ರೀತಿ ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಕ್ರಮೇಣವಾಗಿ ಕಪ್ಪು ವರ್ತುಲ ಕಡಿಮೆಯಾಗೋದನ್ನ ಗಮನಿಸುತ್ತೀರಿ.

4. ಉದ್ದವಾದ ರೆಪ್ಪೆ ಬೇಕಾ? ಹೀಗೆ ಮಾಡಿ
ರೆಪ್ಪೆ ಉದ್ದವಿಲ್ಲ ಅಂತ ಕೃತಕ ರೆಪ್ಪೆ ಹಾಕೋ ಬದಲು ನಿಮ್ಮ ಕಣ್ರೆಪ್ಪೆಗೆ ಸ್ವಲ್ಪ ಕಾಳಜಿ ತೋರಿಸಿ. ರಾತ್ರಿ ಮಲಗುವ ಮುನ್ನ ಸ್ವಲ್ಪ ಹರಳೆಣ್ಣೆಯನ್ನ ಕಣ್ಣಿನ ಮೇಲ್ಭಾಗ ಹಾಗೂ ಕೆಳಭಾಗದ ರೆಪ್ಪೆಗೆ ಹಚ್ಚಿ. ಹೀಗೆ ಮಾಡೋದ್ರಿಂದ ಕಣ್ರೆಪ್ಪೆಯ ಕೂಡಲು ದೃಢವಾಗುತ್ತದೆ. ಮರುದಿನ ಬೆಳಿಗ್ಗೆಯೇ ನೀವು ಈ ಬದಲಾವಣೆ ಗಮನಿಸಬಹುದು. ಆದ್ರೆ ರೆಪ್ಪೆ ಉದ್ದವಾಗಿ ಬೆಳೆಯಬೇಕು ಅಂತಿದ್ರೆ ಈ ರೀತಿ ನಿಯಮಿತವಾಗಿ ಮಾಡುತ್ತಿರಬೇಕು. ಕಣ್ಣಿನ ಹುಬ್ಬಿನಲ್ಲೂ ಕೂದಲು ಕಡಿಮೆಯಿದ್ರೆ ಹರಳೆಣ್ಣೆ ಹಚ್ಚಿ ಮಲಗೋದ್ರಿಂದ ಪ್ರಯೋಜನವಾಗುತ್ತದೆ.

5. ನ್ಯಾಚುರಲ್ ಕರ್ಲ್ಸ್ ಬೇಕಾದ್ರೆ ಇಲ್ಲಿದೆ ಐಡಿಯಾ
ಗುಂಗುರು ಕೂದಲು ಇಲ್ಲ. ಕೂದಲು ಕರ್ಲ್ ಮಾಡೋಕೆ ಕರ್ಲರ್ ಬೇಕು ಅನ್ನೋ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕೂದಲನ್ನ ತೇವವಾಗಿಸಿ, ಸಿಕ್ಕಿಲ್ಲದಂತೆ ಬಾಚಿ ಮೂರ್ನಾಲು ಜಡೆ ಹಾಕಿ ಮಲಗಿ. ಬೆಳಗ್ಗೆ ಎದ್ದು ಜಡೆಯನ್ನ ಬಿಡಿಸಿ ಸ್ವಲ್ಪ ಸೆರಮ್ ಹಾಕಿ ನಿಮ್ಮಿಷ್ಟದಂತೆ ಕ್ರಾಪ್ ತೆಗೆದು ಹೆರ್‍ಸ್ಟೈಲ್ ಮಾಡಿಕೊಳ್ಳಿ. (ಗಮನಿಸಿ: ಜಡೆ ಬಿಡಿಸಿದ ನಂತರ ಬ್ರಶ್ ಅಥವಾ ಸಣ್ಣ ಹಲ್ಲಿನ ಬಾಚಣಿಗೆಯಿಂದ ಬಾಚಬಾರದು. ಸಾಧ್ಯವಾದಷ್ಟು ಬೆರಳಿನ ಸಹಾಯದಿಂದ್ಲೇ ಕೂದಲನ್ನ ಸೆಟ್ ಮಾಡಿ.)

Leave a Reply

Your email address will not be published. Required fields are marked *