Saturday, 19th October 2019

Recent News

ಅಣ್ಣನನ್ನು ಕೊಂದ 5 ತಿಂಗ್ಳ ಬಳಿಕ ತಮ್ಮನನ್ನೂ ಗುಂಡಿಕ್ಕಿ ಕೊಂದ್ರು!

– ಪೊಲೀಸರಿಂದಾಗಿ ಇದ್ದ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು ಅಂತ ತಂದೆ ಕಣ್ಣೀರು

ಚಂಢೀಗಡ: ಅಣ್ಣನನ್ನು ಕೊಂದು 5 ತಿಂಗಳ ಬಳಿಕ ನಾಲ್ವರು ದುಷ್ಕರ್ಮಿಗಳು 18 ವರ್ಷದ ತಮ್ಮನನ್ನೂ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

ಈ ಘಟನೆ ಗುರುವಾರ ಸೊನಿಪತ್ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮದಿನಾ ಗ್ರಾಮದ ರಾಜೇಶ್ ಸಿಂಗ್ ಅಂತಾ ಗುರುತಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಏನಿದು ಘಟನೆ?: 10 ತರಗತಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜೇಶ್ ಆತನ ತಂಗಿಯನ್ನು ಕರೆದುಕೊಂಡು ಬರಲೆಂದು ಆಕೆಯ ಶಾಲೆಯ ಆಟದ ಮೈದಾನದಲ್ಲಿ ನಿಂತಿದ್ದನು. ಈ ವೇಳೆ ರಾಜೇಶ್ ಗೆಳೆಯ ಸಾವನ್ ಕುಮಾರ್ ಕೂಡ ಇದ್ದನು. ಇವರಿಬ್ಬರು ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ಬಂದು ರಾಜೇಶ್ ನನ್ನು ಸುತ್ತುವರಿದು ಗುಂಡಿನ ಮಳೆ ಸುರಿಸಿದ್ದಾರೆ. 10 ಬಾರಿ ರಾಜೇಶ್ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನೆಯಿಂದಾಗಿ ರಾಜೇಶ್ ಗೆಳೆಯನ ಹೊಟ್ಟೆಗೆ ಗಂಭೀರ ಗಾಯಗಳಾಗಿದೆ.

ಪರೀಕ್ಷೆಯ ನಿಮಿತ್ತ ಶಾಲೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೀಗಾಗಿ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಶಾಲೆಯಲ್ಲಿದ್ದ ಸಬ್-ಇನ್ಸ್ ಪೆಕ್ಟರ್ ಸುಭಾಷ್ ಚಂದರ್ ಆಟದ ಮೈದಾನದ ಕಡೆ ದೌಡಾಯಿಸಿದ್ರು. ಈ ವೇಳೆ ರಾಜೇಶ್ ರಕ್ತಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರೆ, ಗೆಳೆಯ ಗಂಭೀರ ಗಾಯಗೊಂಡಿದ್ದನು. ಅಲ್ಲದೇ ಪೊಲೀಸರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಆರೋಪಿಗಳು, ಪೊಲೀಸರು ನೋಡುತ್ತಿದ್ದಂತೆಯೇ ಬಿಳಿ ಬಣ್ಣದ ಕಾರು ಹತ್ತಿ ಪರಾರಿಯಾಗಿದ್ದಾರೆ. ಆದ್ರೆ ಈ ವೇಳೆ ಪೊಲೀಸ್ ಅಧಿಕಾರಿಗೆ ಆರೋಪಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ಯಾಕಂದ್ರೆ ಇತ್ತ ಘಟನೆಯಿಂದ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗೆಳೆಯ ಸಾವನ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಅಂತ ವರದಿಯಾಗಿದೆ.

ಇನ್ನು ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಪತ್ತೆ ಮಾಡಲಾಗಿದ್ದು, ಅದೇ ಗ್ರಾಮದ ಸೀತಾ ಮತ್ತು ಪವನ್ ಎಂಬುದಾಗಿ ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ರಾಜೇಶ್ ಅಣ್ಣ ರಾಕೇಶ್ ಕೊಲೆಯಲ್ಲಿಯೂ ಭಾಗಿಯಾಗಿದ್ದಾರೆಂದು ಶಂಕಿಸಲಾಗಿತ್ತು. ಹಳೆಯ ದ್ವೇಷದಿಂದಾಗಿ ರಾಕೇಶ್ ನನ್ನು ಕೊಲೆ ಮಾಡಲಾಗಿದೆ ಅಂತ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರಾಕೇಶ್ ಕೊಲೆಯನ್ನು ರಾಜೇಶ್ ನೋಡಿದ್ದನು. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ಸೀತಾ ಮತ್ತು ಪವನ್ ತಲೆಮರೆಸಿಕೊಂಡಿದ್ದರು ಅಂತ ಬರೋಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವೀರ್ ಭಾನ್ ತಿಳಿಸಿದ್ದಾರೆ.

`ನನ್ನ ದೊಡ್ಡ ಮಗನ ಕೊಲೆಯಾದ ಬಳಿಕ ಸೀತಾ ಮತ್ತು ಪವನ್ ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅವರಿಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಇದೀಗ ಇದ್ದ ಮತ್ತೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು’ ಅಂತ ರಾಜೇಶ್ ತಂದೆ ಜೈ ಸಿಂಗ್ ತಮ್ಮ ಅಳಲುತೋಡಿಕೊಂಡಿದ್ದಾರೆ.

ರಾಜೇಶ್ ಕೊಲೆಯ ಬಳಿಕ ಗುರುವಾರ ಸಂಜೆಯೇ ರೋಹ್ಟಕ್- ಪಾನಿಪತ್ ನಡುವಿನ ಹೆದ್ದಾರಿ ತಡೆದು ರಾಜೇಶ್ ಮೃತದೇಹವನ್ನಿಟ್ಟು ಉಗ್ರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜೇಶ್ ಕುಟುಂಬ ಹಾಗೂ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ರಾಜೇಶ್ ತಂದೆ ಸಹಿತ ಸುಮಾರು 25 ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ರು. ಆ ಬಳಿಕ ಅಂದ್ರೆ ಇಂದು ರಾಜೇಶ್ ಅಂತ್ಯಸಂಸ್ಕಾರ ನಡೆಯಿತು.

Leave a Reply

Your email address will not be published. Required fields are marked *