Connect with us

Crime

ರಸ್ತೆಬದಿ ಮಲಗಿದ್ದವರ ಮೇಲೆಯೇ ಹರಿದ ಕಾರು: ಐವರ ಸಾವು, 9 ಮಂದಿ ಗಾಯ

Published

on

ಚಂಡೀಗಢ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆಬದಿ ಮಲಗಿದ್ದವರೇ ಮೇಲೆ ಹರಿದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರ ಹಿಸ್ಸಾರ್ ಜಿಲ್ಲೆಯ ಜಿಂದಾಲ್ ಸ್ಟೀಲ್ ಪ್ಲಾಂಟ್ ಸೇತುವೆಯ ಕೆಳಗೆ ಕೂಲಿ ಕಾರ್ಮಿಕರು ಎಂದಿನಂತೆ ಮಲಗಿದ್ದರು. ನಸುಕಿನ 2 ಗಂಟೆ ಸುಮಾರಿಗೆ ವೇಗವಾಗಿ ಬಂದ ಕಾರು ಮಲಗಿದ್ದವರ ಮೇಲೆಯೇ ಹರಿದಿದೆ. ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ.

ಜಿಂದಾಲ್ ಸ್ಟೀಲ್ ಪ್ಲಾಂಟ್ ಬಳಿ ಸೇತುವೆ ದುರಸ್ಥಿ ನಡೆಯುತ್ತಿದ್ದ ಕಾರಣ, ಕಾರ್ಮಿಕರು ರಾತ್ರಿಯಾಗುತ್ತಿದ್ದಂತೆ ಪಕ್ಕದ ಪಾದಾಚಾರಿ ಮಾರ್ಗದಲ್ಲೇ ಮಲಗಿಕೊಳ್ಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಅವರ ಮೇಲೆ ಹರಿದಿದೆ. ಮೃತರನ್ನು ಬಿಹಾರದ ಸಹರ್ಸಾ ಮತ್ತು ಖಗಾರಿಯಾ ಜಿಲ್ಲೆಯವರೆಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದ್ದು, ಬ್ರೇಕ್ ಹಾಕಿದ ರಭಸಕ್ಕೆ ಕಾರು ಸೇತುವೆಯ ತಡೆಗೋಡೆಯನ್ನು ಒಡೆದು, 50 ಅಡಿ ಕೆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಕಾರು ಚಾಲಕನೂ ಸಹ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv