Connect with us

Districts

5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

Published

on

– 30 ಗ್ರಾಮಗಳ ರೈತರಿಂದ 50 ದಿನಗಳ ಸತತ ಹೋರಾಟ
– ಭರವಸೆ ನೀಡಿದ ಸರ್ಕಾರದಿಂದ ಸ್ಪಂದನೆಯಿಲ್ಲ

ರಾಯಚೂರು: 5 ಎ ಕಾಲುವೆಗೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಜಿಲ್ಲೆ ಮಸ್ಕಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 30ಕ್ಕೂ ಅಧಿಕ ಹಳ್ಳಿಗಳ ರೈತರು ಸತತ 50 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಕಿವಿಗೊಡದ ಹಿನ್ನೆಲೆ 5 ಎ ಕಾಲುವೆ ಹೋರಾಟ ಸಮಿತಿ ಮಸ್ಕಿ ಬಂದ್‍ಗೆ ಕರೆ ನೀಡಿತ್ತು. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ವುವ ಮೂಲಕ ಬಂದ್‍ಗೆ ಬೆಂಬಲ ನೀಡಿದ್ದಾರೆ. ಹೋರಾಟದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನ ಭಾಗವಹಿಸಿ ಹಕ್ಕೊತ್ತಾಯ ಮಾಡಿದರು.

ಮಹಿಳೆಯರು, ಮಕ್ಕಳು, ವೃದ್ಧರು ಸಹ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಾಲುವೆಗಾಗಿ ಒತ್ತಾಯಿಸಿದರು. ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಮಕ್ಕಳು ಗಮನ ಸೆಳೆದರೆ, ಹೋರಾಟಗಾರರೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾಗಿ ವೃದ್ಧೆ ರೈತರಿಗೆ ಸ್ಪೂರ್ತಿ ತುಂಬಿದಳು. ನಮಗೆ ಕಾಲುವೆ ನಿರ್ಮಿಸಿ ನೀರು ಕೊಡಿ ಎಂದು ಘೋಷಣೆ ಕೂಗಿದಳು. ಲಿಂಗಸಗೂರು -ಸಿಂಧನೂರು ಮಾರ್ಗ ಬಸ್ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈಗಲೂ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎನ್ ಆರ್ ಬಿ ಸಿ 5ಂ ಉಪ ಕಾಲುವೆಯನ್ನ ನಿರ್ಮಾಣ ಮಾಡಿ ನೀರು ಕೊಡಲು ಒತ್ತಾಯಿಸಿ ನಡೆದಿರುವ ಹೋರಾಟಕ್ಕೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಗ್ರಾಮಗಳ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದರು. ಮುಂಬರುವ ಮಸ್ಕಿ ವಿಧಾನಸಭಾ ಉಪಚುನಾವಣೆ ಸೇರಿ ಎಲ್ಲಾ ಚುನಾವಣೆ ಮತದಾನವನ್ನ ಬಹಿಷ್ಕರಿಸುವುದಾಗಿ ರೈತರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in