Connect with us

Corona

ಚಿಕ್ಕಬಳ್ಳಾಪುರಕ್ಕೂ ಮುಂಬೈ ಕಂಟಕ- ಒಂದೇ ದಿನ 47 ಮಂದಿಗೆ ಕೊರೊನಾ ದೃಢ

Published

on

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈ ಕಂಟಕ ಎದುರಾಗಿದ್ದು, ಇಂದು ಒಂದೇ ದಿನ 47 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದೆ.

ಇಂದು ಆರೋಗ್ಯ ಇಲಾಖೆ ನೀಡಿದ ಬೆಳಗಿನ ವರದಿಯಲ್ಲಿ 45 ಹಾಗೂ ಸಂಜೆಯ ವರದಿಯಲ್ಲಿ ಮತ್ತೆರೆಡು ಪ್ರಕರಣ ವರದಿಯಾಗಿದ್ದು, ಒಟ್ಟಾರೆ ಇಂದು 47 ಪ್ರಕರಣಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಳೆಯ 26 ಪ್ರಕರಣಗಳು ಹಾಗೂ ಇಂದಿನ 47 ಪ್ರಕರಣಗಳು ಸೇರಿ ಒಟ್ಟು 73 ಪ್ರಕರಣಗಳಾಗಿವೆ.

ಮೊದಲ 26 ಪ್ರಕರಣಗಳಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಮೃತಪಟ್ಟಿದ್ದರು. ಹೀಗಾಗಿ 5 ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ 5 ಪ್ರಕರಣಗಳ ಜೊತೆಗೆ ಇಂದಿನ 47 ಸೇರಿ ಜಿಲ್ಲೆಯಲ್ಲಿ 53 ಸಕ್ರಿಯ ಪ್ರಕರಣಗಳಾಗಿ ಉಳಿದಿವೆ. ಒಟ್ಡಾರೆ ಇದುವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈ ನಿಂದಲೇ ಕಳೆದ ಮೂರ್ನಾಲ್ಕು ದಿನಗಳಿಂದ 247 ಮಂದಿ ಆಗಮಿಸಿದ್ದು ಅವರಲ್ಲಿ 138 ಮಂದಿ ಗೌರಿಬಿದನೂರು ತಾಲೂಕಿನರಾಗಿದ್ದರು. ಅದರಲ್ಲಿ 108 ಮಂದಿಯ ಕೊರೊನಾ ಪರೀಕ್ಷೆ ಮುಕ್ತಾಯವಾಗಿದ್ದು, ಇಂದು 45 ಪಾಸಿಟಿವ್ ಹಾಗೂ 63 ನೆಗಟಿವ್ ವರದಿ ಬಂದಿದೆ.

ಉಳಿದಂತೆ 109 ಮಂದಿ ಬಾಗೇಪಲ್ಲಿ ತಾಲೂಕಿನವರಾಗಿದ್ದು, ಇವರಲ್ಲಿ ಕೇವಲ ಮೂವರ ವರದಿ ಬಂದಿದೆ. ಅದರಲ್ಲಿ ಎರಡು ಪಾಸಿಟಿವ್ ಹಾಗೂ ಒಂದು ನೆಗಟಿವ್ ಆಗಿದೆ. ಇಷ್ಟು ದಿನ ಬಾಗೇಪಲ್ಲಿ ತಾಲೂಕಿನಲ್ಲಿ ಯಾವುದೇ ಸೋಂಕಿನ ಪ್ರಕರಣ ವರದಿಯಾಗಿರಲಿಲ್ಲ. ಆದರೆ ಇಂದು ಎರಡು ಪ್ರಕರಣ ದೃಢವಾಗಿರುವುದರಿಂದ ಬಾಗೇಪಲ್ಲಿಗೂ ಕೊರೊನಾ ಸೋಂಕಿನ ನಂಟು ಅಂಟಿದೆ.

ನಾಳೆಯೂ ಸಹ ಗೌರಿಬಿದನೂರಿನ ಉಳಿದ 30 ಮಂದಿ ಹಾಗೂ ಬಾಗೇಪಲ್ಲಿಯ 106 ಮಂದಿಯ ವರದಿ ಬರಬೇಕಿದೆ. ಇವರಲ್ಲೂ ಸಹ ಬಹುತೇಕರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಮೂಡಿದೆ.