Connect with us

Latest

ಕುಡಿದ ಮತ್ತಲ್ಲಿ ಸಚಿವೆ ಸ್ಮೃತಿ ಇರಾನಿ ಕಾರು ಹಿಂಬಾಲಿಸಿದ 4 ವಿದ್ಯಾರ್ಥಿಗಳು

Published

on

ನವದೆಹಲಿ: ಕುಡಿದ ಮತ್ತಿನಲ್ಲಿ ದೆಹಲಿ ವಿಶ್ವವಿದ್ಯಾಲಯದ 4 ವಿದ್ಯಾರ್ಥಿಗಳು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಕಾರನ್ನು ಫಾಲೋ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ರಾಷ್ಟ್ರರಾಜಧಾನಿ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿದೆ.

ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಯಲ್ಲಿ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಈ ನಾಲ್ವರು ಯುವಕರು ಕಾರನ್ನು ಫಾಲೋ ಮಾಡಿ, ಮ್ಯಾನ್ಮಾರ್ ರಾಯಭಾರ ಕಚೇರಿ ಬಳಿ ಪೈಲಟ್ ಕಾರನ್ನು ಓವರ್‍ಟೇಕ್ ಮಾಡಲು ಯತ್ನಿಸಿದ್ದಾಗಿ ಹೇಳಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಯುವಕರಾದ ಆನಂದ್ ಶರ್ಮಾ, ಅವಿನಾಶ್, ಶಿತಾಂಶು ಹಾಗೂ ಕುನಾಲ್ 20 ರಿಂದ 25ರ ವಯಸ್ಸಿನವರಾಗಿದ್ದು, ಎಲ್ಲರೂ ಮದ್ಯಪಾನ ಮಾಡಿದ್ದರು. ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದರು. ಮೊದಲಿಗೆ ಎಲ್ಲರನ್ನೂ ಚಾಣಾಕ್ಯಪುರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ನಂತರ ಮಹಿಳೆಯ ಕಾರು ಹಿಂಬಲಿಸಿ, ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಯುವಕರನ್ನು ಬಂಧಿಸಿ ಇಂದು ಬೆಳಿಗ್ಗೆ ಕೋರ್ಟ್‍ಗೆ ಹಾಜರುಪಡಿಸಲಾಗಿದೆ.

ಅತೀ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡಿರುವುದು ಮತ್ತು ಸಚಿವೆ ಹಾಗು ಅವರ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ಕಾರಣ ಯುವಕರನ್ನು ಬಂಧಿಸಲಾಗಿದೆ. ಯುವಕರು ಮದ್ಯಾಪಾನ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇವರೆಲ್ಲಾ ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿ ಮುಗಿಸಿ ಬರುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಸಚಿವೆಯ ಪೈಲೆಟ್ ಕಾರನ್ನು ಪದೇ ಪದೇ ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ, ಫ್ರೆಂಚ್ ರಾಯಭಾರ ಕಚೇರಿ ಬಳಿ ಯುವಕರ ಕಾರನ್ನು ತಡೆದಿದ್ದಾರೆ, ನಂತರ ಪೊಲೀಸ್ ಕಂಟ್ರೋಲ್ ರೂಮ್ ವ್ಯಾನ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ಅವರಿಗೆ ಯುವಕರನ್ನು ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ನಾಲ್ವರು ಯುವಕರಿಗೆ ಜಾಮೀನು ಸಿಕ್ಕಿದೆ ಎಂದು ವರದಿಯಾಗಿದೆ.