Connect with us

Districts

ಆಪರೇಷನ್ ಕಮಲಕ್ಕೆ ಜೆಡಿಎಸ್ ಪ್ರತಿತಂತ್ರ- ಸಿಎಂ ಸಂಪರ್ಕದಲ್ಲಿದ್ದಾರೆ ನಾಲ್ಕು ಜನ ಬಿಜೆಪಿ ಶಾಸಕರು!

Published

on

ಮಂಡ್ಯ: ಆಪರೇಷನ್ ಕಮಲಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಿಸಿದ್ದು, ಬಿಜೆಪಿಯ ನಾಲ್ಕು ಜನ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಲು ಮುಂದಾಗಿದೆ ಎಂದು ಜೆಡಿಎಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಹಾಸನ ಶಾಸಕ ಪ್ರೀತಮ್ ಗೌಡ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಅವರನ್ನು ಜೆಡಿಎಸ್‍ಗೆ ಕರೆತರುವ ಜವಾಬ್ದಾರಿಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಅವರಿಗೆ ಒಪ್ಪಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಪಾಂಡವಪುರದ ಕೆಡಿಪಿ ಸಭೆ ಮುಗಿಯುತ್ತಿದ್ದಂತೆ ಸಚಿವ ಪುಟ್ಟರಾಜು ಅವರಿಗೆ ಬೆಂಗಳೂರಿಗೆ ಬರುವಂತೆ ಸಿಎಂ ಕುಮಾರಸ್ವಾಮಿ ತುರ್ತು ಬುಲಾವ್ ನೀಡಿದ್ದು, ಸಿಎಂ ಸೂಚನೆಯಂತೆ ಪುಟ್ಟರಾಜು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಪುಟ್ಟರಾಜು ಅವರ ಜೊತೆಗೆ ಬಂಡೆಪ್ಪ ಕಾಶಂಪೂರ್ ಅವರಿಗೂ ಜವಾಬ್ದಾರಿ ನೀಡಲಾಗಿದ್ದು, ಏನು ಮಾಡುತ್ತಿರೋ ಗೊತ್ತಿಲ್ಲ. ಬಿಜೆಪಿ ಶಾಸಕರನ್ನು ಮನವೊಲಿಸಿ, ಪಕ್ಷಕ್ಕೆ ಕರೆತರಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ.

ಇತ್ತ ಬಿಜೆಪಿ ಹೈಕಮಾಂಡ್ ರಾಜ್ಯದ ಎಲ್ಲ ಶಾಸಕರನ್ನು ದೆಹಲಿಗೆ ಕರೆಸಿಕೊಂಡಿದೆ. ಜೊತೆಗೆ ಕಾಂಗ್ರೆಸ್‍ನ ಅತೃಪ್ತ ಶಾಸಕರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಎಚ್ಚೆತ್ತುಕೊಂಡ ಸಿಎಂ ತಮ್ಮ ಸಚಿವರ ಮೂಲಕ ಬಿಜೆಪಿ ಶಾಸಕರನ್ನು ಸಂಪರ್ಕಕ್ಕೆ ತೆಗೆದುಕೊಂಡು, ಅವರಿಂದ ರಾಜೀನಾಮೆ ಕೊಡಿಸುವ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv