ಚಿಕ್ಕಮಗಳೂರು: 30ಕ್ಕೂ ಹೆಚ್ಚು ನಾಯಿಗಳನ್ನ ತಿಂದು ಅದರ ರುಚಿಗೆ ನಾಲ್ಕೈದು ಗ್ರಾಮಗಳ ಸುತ್ತಮುತ್ತಲಿನಲ್ಲೇ ಓಡಾಡಿಕೊಂಡು ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ವಿಟ್ಲಾಪುರ, ಅಮೃತಾಪುರ, ನೇರಲಿಕೆರೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರತೆ ಹಾವಳಿ ಮಿತಿಮೀರಿತ್ತು. ಜನ ರಾತ್ರಿ ಅಲ್ಲ, ಹಗಲಿನಲ್ಲಿ ಓಡಾಡೋದಕ್ಕೂ ಭಯ ಪಡುತ್ತಿದ್ದರು. ಕಳೆದ ಹಲವು ದಿನಗಳಿಂದ ಜನ ಚಿರತೆ ಆತಂಕದಿಂದಲೇ ಬದುಕುತ್ತಿದ್ದರು.
Advertisement
ತೋಟ, ಹೊಲ-ಗದ್ದೆಗಳಿಗೆ ಹೋಗೋದಕ್ಕೂ ಜನ ಹಿಂದೇಟು ಹಾಕುತ್ತಿದ್ದರು. ಹೀಗೆ ಹೊಲಗದ್ದೆಗಳಿಗೆ ಹೋಗೋ ಜನರಿಗೆ ಅಲ್ಲಲ್ಲೇ ಚಿರತೆ ದರ್ಶನ ಕೂಡ ಕೊಟ್ಟಿತ್ತು. ಇದು ಜನರಲ್ಲಿ ಮತ್ತಷ್ಟು ಭಯ ಮೂಡಿಸಿತ್ತು. ಅಷ್ಟೇ ಅಲ್ಲದೆ ನಾಯಿ ಮಾಂಸದ ರುಚಿಗೆ ಒಗ್ಗಿಕೊಂಡಿದ್ದ ಚಿರತೆ ನಾಲ್ಕೈದು ಗ್ರಾಮಗಳ ಸುತ್ತಲಿನಲ್ಲೇ ಠಿಕಾಣಿ ಹೂಡಿತ್ತು.
Advertisement
Advertisement
ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನ ತಿಂದು ಮುಗಿಸಿತ್ತು. ಅದೇ ರುಚಿಗೆ ಪದೇ-ಪದೇ ನಾಯಿಗಳನ್ನ ಬೇಟೆಯಾಡಲು ಗ್ರಾಮಕ್ಕೆ ಬರುತ್ತಿದ್ದರಿಂದ ಸ್ಥಳೀಯರಿಗೆ ತಲೆನೋವಿನ ಜೊತೆ ಭಯ ಕೂಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಜೀವ ಭಯದಿಂದ ಸ್ಥಳೀಯರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಇಲಾಖಾ ಸಿಬ್ಬಂದಿ ಅದನ್ನು ಸೆರೆ ಹಿಡಿಯಲು ಬೋನಿನೊಳಗೆ ನಾಯಿಯನ್ನ ಬಿಟ್ಟು ಚಿರತೆಗಾಗಿ ಹೊಂಚು ಹಾಕಿ ಕೂತಿದ್ದರು.
Advertisement
ನಾಯಿ ಆಸೆಗೆ ಬಂದ ಚಿರತೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಚಿರತೆ ಭಯದಲ್ಲಿ ಬದುಕುತ್ತಿದ್ದ ಗ್ರಾಮಸ್ಥರಲ್ಲಿ ಚಿರತೆ ಆತಂಕ ದೂರಾಗಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಚಿರತೆ ನೋಡಲು ಮುಗಿಬಿದ್ದಿದ್ದರು.