Connect with us

Chikkaballapur

ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

Published

on

ಚಿಕ್ಕಬಳ್ಳಾಪುರ: ಮೊಬೈಲ್ ಯುಗದಲ್ಲಿ ಎಲ್ಲವೂ ಫಾಸ್ಟ್, ಫಾಸ್ಟ್. ಬೇಗ ದುಡ್ಡು ಮಾಡಬೇಕು, ಬೇಗ ಶ್ರೀಮಂತನಾಗಬೇಕು ಎಂಬ ತವಕದಲ್ಲಿ ಮನುಷ್ಯ ಅತಿಯಾಸೆಗೆ ಬಲಿಯಾಗುತ್ತಿದ್ದಾನೆ. ಇಂತಹದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಶ್ರೀಮಂತಿಕೆ ಆಸೆ ತೋರಿಸಿ ಹಾವನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರೆಡ್ ಸ್ಯಾಂಡ್ ಬೋವಾ ಸ್ನೇಕ್ ಅಂತ ಕರೆಯುವ ಮಣ್ಣು ಮುಕ್ಕುವ ಹಾವಿನ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಲು ಹೊಂಚು ಹಾಕಿದ್ದ ಮೂವರನ್ನು ಜಿಲ್ಲೆಯ ಗೌರಿಬಿದನುರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಇಡಗೂರು ಗ್ರಾಮದ ಬಳಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನರಸಿಂಹ, ಅನಿಲ್ ಹಾಗೂ ಹರೀಶ್ ಬಂಧಿತರು.

ಆಕಸ್ಮಿಕವಾಗಿ ಸಿಕ್ಕ ಹಾವನ್ನು ಬಿಂದಿಗೆಯಲ್ಲಿಟ್ಟುಕೊಂಡು 2 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಬಳಿ ಎರಡು ತಲೆ ಹಾವಿದೆ. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮೀದೇವಿ ಒಲಿದು ಬರುತ್ತಾಳೆ ಎಂದು ಹೇಳಿ ಅಮಾಯಕರಿಂದ ಹಣ ಪೀಕಲು ಆರೋಪಿಗಳು ಮುಂದಾಗಿದ್ದರು.

ಎರಡು ತಲೆ ಹಾವು ಮನೆಯಲ್ಲಿ ಇಟ್ಟುಕೊಂಡರೆ ಹಣ ಗಳಿಸಬಹುದು ಎಂದು ಮಾರಾಟ ಮಾಡೋ ಅಸಾಮಿಗಳೇ ಏಕೆ ಮನೆಯಲ್ಲಿ ಹಾವನ್ನು ಇಟ್ಕೊಂಡು ಹಣವಂತರಾಗಬಾರದೆಂದು ನಾಗರಿಕರು ಪ್ರಶ್ನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಿಂಸಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕೆನ್ನುತ್ತಾರೆ. ವನ್ಯಜೀವಿ ಸಂರಕ್ಷಕ ಪೃಥ್ವಿರಾಜ್. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಹಾವನ್ನು ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಹಾವನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.