Connect with us

Latest

22 ನಿಮಿಷದಲ್ಲಿ 29 ಕಿ.ಮೀ ದೂರಕ್ಕೆ ಹೃದಯ ರವಾನೆ

Published

on

ಹೈದರಾಬಾದ್: ಆಸ್ಪತ್ರೆಯಿಂದ ಸುಮಾರು 29 ಕಿ.ಮೀ ದೂರದಲ್ಲಿದ್ದ ವಿಮಾನ ನಿಲ್ದಾಣಕ್ಕೆ ಕೇವಲ 22 ನಿಮಿಷದಲ್ಲಿ ಅಂಬುಲೆನ್ಸ್ ಹೃದಯವನ್ನು ಸುರಕ್ಷಿತವಾಗಿ ಕೊಂಡೊಯ್ಯಲು ಸಂಚಾರಿ ಪೊಲೀಸರು ಸಹಕರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬುಧವಾರ ಸೈಫಾಬಾದ್‍ನಲ್ಲಿರುವ ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ನಿಂದ ಜೀವಂತ ಹೃದಯವನ್ನು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೊಂಡೊಯ್ಯಬೇಕಿತ್ತು. ಆಸ್ಪತ್ರೆಯಿಂದ ವಿಮಾನ ನಿಲ್ದಾಣ ಸುಮಾರು 29 ಕಿ.ಮೀ ದೂರದಲ್ಲಿದೆ. ಈ ದೂರವನ್ನು ತಲುಪಲು ಅಂದಾಜು 1 ಗಂಟೆಯಾದರೂ ಸಮಯ ತಗಲುತ್ತದೆ. ಆದ್ರೆ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಿಂದ ಹೃದಯವನ್ನು ಕೊಂಡೊಯ್ಯುವುದಕ್ಕೆ ಸಂಚಾರಿ ಪೊಲೀಸರು ಸಹಕಾರ ನೀಡಿದ ಹಿನ್ನೆಲೆಯಲ್ಲಿ 22 ನಿಮಿಷದಲ್ಲಿ ಅಂಬುಲೆನ್ಸ್ ವಿಮಾನ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿ ಒಂದು ಜೀವ ಉಳಿಸಿದೆ.

ಸಂಚಾರಿ ಪೊಲೀಸರು ಅಂಬ್ಯುಲೆನ್ಸ್ ಹೋಗುತ್ತಿದ್ದ ಮಾರ್ಗದಲ್ಲಿ ಗ್ರೀನ್ ಚಾನೆಲ್ ವ್ಯವಸ್ಥೆ ಮಾಡಿದ್ದರಿಂದ ಹೃದಯ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಿದೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಇರುತ್ತದೆ. ಹೀಗಾಗಿ ಹೃದಯವನ್ನು ಸಾಗಿಸುವ ಮುನ್ನವೇ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ನೆರವನ್ನು ಪಡೆಯಲಾಗಿತ್ತು. ವೈದ್ಯಕೀಯ ತಂಡದ ಜೊತೆಗೆ ಹೃದಯವನ್ನು ತೆಗೆದುಕೊಂಡು ಮಧ್ಯಾಹ್ನ 12:37ಕ್ಕೆ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ 12:59ಕ್ಕೆ ವಿಮಾನ ನಿಲ್ದಾಣವನ್ನು ತಲುಪಿತ್ತು.

ಟ್ರಾಫಿಕ್ ತಡೆಗಟ್ಟಿ ಅಂಬುಲೆನ್ಸ್ ಸುರಕ್ಷಿತವಾಗಿ ವಿಮಾನ ನಿಲ್ದಾಣವನ್ನು ತಲುಪಲು ಸಂಚಾರಿ ಪೊಲೀಸರು ಸಹಕರಿಸಿದಕ್ಕೆ ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ.