Thursday, 21st November 2019

ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಮೂವರಿಂದ ಗ್ಯಾಂಗ್ ರೇಪ್

ಲಕ್ನೋ: ಲಿಫ್ಟ್ ಕೊಡುವುದಾಗಿ ಹೇಳಿ 24 ವರ್ಷದ ಯುವತಿಯನ್ನು ಕಾಡಿನೊಳಗೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮುಜಾಫುರ್‍ನಗರ ಜಿಲ್ಲೆಯ ಬುಧನಾ ಸಮೀಪದಲ್ಲಿ ಅರಣ್ಯ ಪ್ರದೇಶದಲ್ಲಿ ಶನಿವಾರ ಘಟನೆ ನಡೆದಿದೆ. ಬೈಕ್ ಮೇಲೆ ಕರೆದುಕೊಂಡ ಹೋದ ಮೂವರು ಈ ಕೃತ್ಯ ಎಸಗಿದ್ದಾರೆ. ಬಳಿಕ ಯಾರಿಗೂ ಹೇಳದಂತೆ ಯುವತಿಗೆ ಎಚ್ಚರಿಕೆ ನೀಡಿದ್ದಾರೆ.

ಆಗಿದ್ದೇನು?: 
ಬುಧನಾದಿಂದ ತಮ್ಮ ಫುಗಾನ ಗ್ರಾಮಕ್ಕೆ ಹೋಗಲು ಯುವತಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಳು. ಬಹಳ ಹೊತ್ತಾದರೂ ಬಸ್ ಬಂದಿರಲಿಲ್ಲ. ಈ ವೇಳೆ ಇಲ್ಲಿಗೆ ಬಂದ ಮೂವರು ಸವಾರರು, ಲಿಫ್ಟ್ ಕೊಡುವುದಾಗಿ ಹೇಳಿ ಯುವತಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ.

ಅರಣ್ಯದಲ್ಲಿ ಬೈಕ್ ನುಗ್ಗುತ್ತಿದ್ದಂತೆ ಯುವತಿ ಕಿರುಚಲು ಪ್ರಾರಂಭಿಸಿದ್ದಾಳೆ. ಆದರೆ ಇದನ್ನು ಲೆಕ್ಕಿಸದ ದುಷ್ಕರ್ಮಿಗಳು, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಈ ವಿಷಯವನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಕುರಿತು ಯುವತಿ ಇಂದು ಬುಧನಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *