Connect with us

Hassan

ಕುಡಿಯಲ್ಲ, ಆದ್ರೆ ಸಂಜೆ ಸ್ವಲ್ಪ ಕುಡಿಯುತ್ತೇನೆ: ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸಿದ ಕುಡುಕ

Published

on

– 22.79 ಲಕ್ಷ ಕಾಣಿಕೆ ಸಂಗ್ರಹ

ಹಾಸನ: ಹಾಸನಾಂಬೆಗೆ ಭಕ್ತರು ವಿವಿಧ ರೀತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅದೇ ರೀತಿ ಈ ಬಾರಿ ವ್ಯಕ್ತಿಯೊಬ್ಬ ಕುಡಿಯುವುದನ್ನು ಬಿಡುತ್ತೇನೆ, ಆದ್ರೆ ದಿನಕ್ಕೆ ಸ್ವಲ್ಪ ಮಾತ್ರ ಕುಡಿಯುತ್ತೇನೆ ಎಂದು ಬೇಡಿಕೊಂಡಿದ್ದಾನೆ.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಆಡಳಿತ ಮಂಡಳಿ ಭಕ್ತರು ದೇವಿಗೆ ಸಲ್ಲಿಸಿರುವ ಕೋರಿಕೆ ಹಾಗೂ ಕಾಣಿಕೆಯನ್ನು ಪರಿಶೀಲಿಸಿದ್ದಾರೆ. ತರಹೇವಾರಿ ಕೋರಿಕೆಯ ಪತ್ರಗಳು ಬಂದಿದ್ದು, ಇದರಲ್ಲಿ ಕುಡುಕನೊಬ್ಬನ ಪ್ರಾರ್ಥನೆ ಗಮನ ಸೆಳೆದಿದೆ. ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದಾನೆ.

ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು, ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು, ತಾಯಿ ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿದ್ದು, ಪತ್ನಿ ಮಕ್ಕಳ ಒಂದು ಮಾಡು, ನನ್ನ ಗಂಡ ಕುಡಿಯುವುದನ್ನು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ ಮಾಡಿಕೊಂದ್ದಾರೆ. ಇದೇ ರೀತಿ ಹಾಸನಾಂಬೆ ದರ್ಶನಕ್ಕೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ, ಈ ಬಾರಿ ಇಳಿಕೆ ಕಂಡಿದ್ದು, ಕೇವಲ 22 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ. ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ 22 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ಹಾಸನಾಂಬ ದೇವಿಯ ಹುಂಡಿಗೆ 21,34,052, ಸಿದ್ದೇಶ್ವರ ಸ್ವಾಮಿ ದೇವಾಲಯ ಹುಂಡಿಗೆ 1,45,720 ರೂ. ಒಟ್ಟು 22,79,772 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ 12 ದಿನ ಹಾಸನಾಂಬ ದರ್ಶನೋತ್ಸವ ಆಯೋಜಿಸಲಾಗಿತ್ತು. ಆದರೆ ದೇವಾಲಯದ ಒಳಗೆ ನೇರವಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ. ಬದಲಿಗೆ ನಗರದ ಕೆಲವೆಡೆ ಎಲ್‍ಇಡಿ ಪರದೆ ಮೂಲಕ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಣ್ಯರಿಗೆ ಮಾತ್ರ ನೇರ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ಜಾತ್ರೆ ಮುಕ್ತಾಯಕ್ಕೆ ಎರಡು ದಿನ ಬಾಕಿ ಇರುವಾಗ ಸಾರ್ವಜನಿಕ ರು ಹಾಗೂ ಭಕ್ತರ ಮನವಿ ಮೇರೆಗೆ ದೇವಾಲಯಕ್ಕೆ ಪ್ರವೇಶ ಕಲ್ಪಿಸಿ, ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದರ್ಶನ ಇಲ್ಲವಾದರೂ ದೇವಾಲಯದ ಆವರಣ ಹಾಗೂ ಮುಂಭಾಗ ಇರಿಸಲಾಗಿದ್ದ ಕಾಣಿಕೆ ಸಂಗ್ರಹ ಹುಂಡಿಗೆ ಭಕ್ತರು ಹಾಕಿದ್ದ ಕಾಣಿಕೆ 21 ಲಕ್ಷ ಅಗಿದ್ದು, ಕಳೆದ ಬಾರಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ಕಾರಣ 3 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು.

40 ಸಾವಿರ ಭಕ್ತರಿಂದ ದರ್ಶನ:
ಈ ಬಾರಿ ಕೇವಲ ಎರಡು ದಿನ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 40 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ. ಆದರೆ ಕಳೆದ ಬಾರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಅಲ್ಲದೆ ಆನ್‍ಲೈನ್‍ನಲ್ಲಿ 8.80 ಲಕ್ಷ ಬಾರಿ ಯೂಟ್ಯೂಬ್ ಮೂಲಕ ದರ್ಶನ ಪಡೆದಿದ್ದರು.

Click to comment

Leave a Reply

Your email address will not be published. Required fields are marked *

www.publictv.in