– 6 ಸಚಿವರಿಂದ ಸುದ್ದಿಗೋಷ್ಠಿ
– ಸರ್ಕಾರ ಯಾವುದೇ ಹಗರಣ ನಡೆಸಿಲ್ಲ
ಬೆಂಗಳೂರು: “ದೋಸ್ತಿ ಸರ್ಕಾರ ಇದ್ದಾಗ 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಖರೀದಿಸಿದ್ದಾರಾ? ನಾವು ಪಾರದರ್ಶಕವಾಗಿ ಎಲ್ಲವನ್ನು ಖರೀದಿ ಮಾಡಿದ್ದೇವೆ. ಎಲ್ಲ ಲೆಕ್ಕಾಚಾರವನ್ನು ನಾವು ನೀಡುತ್ತೇವೆ. ನಮ್ಮ ಸರ್ಕಾರ ಕೋವಿಡ್ 19 ಸಮಯದಲ್ಲಿ ಅಕ್ರಮ ಎಸಗಿಲ್ಲ” – ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಅಕ್ರಮ ಎಸಗಿದೆ ಎಂದು ಸಿದ್ದರಾಮಯ್ಯನವರು ಮಾಡಿದ ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ಈ ರೀತಿಯಾಗಿ ಉತ್ತರ ನೀಡಿದ್ದಾರೆ.
ಬೆಳಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಡಿರುವ ಆರೋಪಕ್ಕೆ ದಾಖಲೆ ಸಮೇತವಾಗಿ ಬಿಜೆಪಿ ಸರ್ಕಾರದ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಕೆ.ಸುಧಾಕರ್, ಶ್ರೀರಾಮುಲು, ಶಿವರಾಂ ಹೆಬ್ಬಾರ್ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು.
Advertisement
Advertisement
ಆರಂಭದಲ್ಲಿ ಆರ್.ಅಶೋಕ್ ಮಾತನಾಡಿ, 2019ರ ಜನವರಿಯಲ್ಲಿ ಸರ್ಕಾರ 9 ಯೂನಿಟ್ ಖರೀದಿ ವೆಂಟಿಲೇಟರ್ ಖರೀದಿಸಿತ್ತು. ಆ ವೇಳೆ ಒಂದು ವೆಂಟಿಲೇಟರ್ಗೆ 14.51 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. 2019ರ ಜುಲೈನಲ್ಲಿ 28 ಯೂನಿಟ್ ಖರೀದಿಸಿತ್ತು. ಆಗ ಒಂದು ಯೂನಿಟ್ಗೆ 15 ಲಕ್ಷ ರೂ. ನೀಡಿತ್ತು. 20119ರ ಜನವರಿಯಲ್ಲಿ 9 ವೆಂಟಿಲೇಟರ್ ಖರೀದಿ ಮಾಡಿತ್ತು. ಈ ವೇಳೆ ಒಂದು ವೆಂಟಿಲೇಟರ್ಗೆ 21 ಲಕ್ಷ ರೂ. ನೀಡಿತ್ತು. ಈ ಸಮಯದಲ್ಲಿ ಯಾವುದೇ ತುರ್ತು ಅಗತ್ಯ ಇರಲಿಲ್ಲ. ಆ ವೆಂಟಿಲೇಟರ್ಗಳು ಚಂದ್ರಲೋಕದಿಂದ ಬಂದಿರಬಹುದೇನೋ. ನಾವು ಪಾರದರ್ಶಕವಾಗಿ ಖರೀದಿ ಮಾಡಿದ್ದೇವೆ ಎಂದು ಉತ್ತರ ನೀಡಿದರು. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ
Advertisement
ಯಾವ್ಯಾವ ಜಿಲ್ಲಾಧಿಕಾರಿಗಳು ಎಷ್ಟು ಖರ್ಚು ಮಾಡಿದ್ದಾರೆ ಎಲ್ಲದ್ದಕ್ಕೂ ನಮ್ಮ ಬಳಿ ಲೆಕ್ಕವಿದೆ. ಜಿಲ್ಲಾಧಿಕಾರಿಗಳಿಗೆ 232 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ 159 ಕೋಟಿ ರೂ. ಖರ್ಚಾಗಿದೆ. ವಿಪತ್ತು ನಿರ್ವಹಣೆ ಅಡಿಯಲ್ಲಿ ಈ ಹಣವನ್ನು 30 ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
Advertisement
ಡಿಸಿಎಂ ಅಶ್ವಥನಾರಾಯಣ್ ಮಾತನಾಡಿ, ಕಾಂಗ್ರೆಸ್ನವರು ಅಪಾದನೆಯನ್ನೇ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸಕ್ಕೆ ಉತ್ತರ ಕೊಡಬೇಕು ಅಂತಿರಲಿಲ್ಲ. ಆಧಾರರಹಿತ ಆರೋಪ ಮಾಡಿ ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಲಾಖಾವರು ಕೇಳಿರುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡುತ್ತೇವೆ. ಆರೋಗ್ಯ ಇಲಾಖೆಯಲ್ಲಿ 750 ಕೋಟಿ ಖರ್ಚಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಖರ್ಚು ಮಾಡಿರುವುದು 290 ಕೋಟಿ ರೂ. ಅಷ್ಟೇ ಎಂದು ತಿಳಿಸಿದರು.
ಮಾರ್ಚ್ ನಲ್ಲಿ 2,100 ರೂಪಾಯಿಗೆ 3 ಲಕ್ಷ ಪಿಪಿಇ ಕಿಟ್ ಅನ್ನು ಮಾರ್ಚ್ ನಲ್ಲಿ ಖರೀದಿ ಮಾಡಿದ್ದೇವೆ. ಇದು 10 ಕಾಂಪೋನೆಟ್ ಕಿಟ್ಗಳು ಆಗಿದ್ದು ಈಗಲೂ ಇದರ ಬೆಲೆ 3,900 ರೂ. ಇದೆ. ಮಾರ್ಚ್ನಲ್ಲಿ ಚೀನಾದಿಂದ ಆಮದು ಮಾಡಿಕೊಡಾಗ ನಮಗೆ ಯುದ್ಧದ ಆತಂಕ ಇತ್ತಾ ಎಂದು ಪ್ರಶ್ನಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕೋವಿಡ್ ಗೆ ಒಟ್ಟಾರೆ ಖರ್ಚು 2,118 ಕೋಟಿ ರೂ. ಆಗಿದೆ. ಎಲ್ಲ ಇಲಾಖೆಗಳ ಸಲಕರಣೆಗಳ ಖರೀದಿಗೆ ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ, ಸಾರಿಗೆ ಇಲಾಖೆ, ಗೃಹ ಇಲಾಖೆ, ಬಿಬಿಎಂಪಿ ಸೇರಿ ಎಲ್ಲ ಇಲಾಖೆಗಳಲ್ಲಿ ಸಲಕರಣೆಗಳ ಖರೀದಿಗೆ ಒಟ್ಟು 506 ಕೋಟಿ ರೂ. ಖರ್ಚಾಗಿದೆ. ಬಾದಿತರ ಪರಿಹಾರ ಘೋಷಣೆಗಳಿಗಾಗಿ ಒಟ್ಟು 1,161 ಕೋಟಿ ರೂ. ಖರ್ಚಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ನಮ್ಮ ಇಲಾಖೆಯಲ್ಲಿ 818 ಕೋಟಿ ರೂ. ಪ್ರಸ್ತಾವನೆ ಆಗಿದೆ. ಯಾವುದಕ್ಕೂ ಮಂಜೂರಾತಿ ಆಗಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇಲ್ಲಿಯ ತನಕ 33 ಕೋಟಿ ಮಾತ್ರ ಖರ್ಚಾಗಿದೆ ಎಂದು ಹೇಳಿದರು.
ವಿಶ್ವದ ನಂಬರ್ 1 ವೆಂಟಿಲೇಟರ್ 13 ಲಕ್ಷಕ್ಕೆ ತಂದಿದ್ದೇವೆ. ಈ ವಿಚಾರಕ್ಕೆ ನೀವು ನಮ್ಮ ಬೆನ್ನನ್ನು ತಟ್ಟಬೇಕಿತ್ತು. ಕೊರೊನಾದಿಂದ ಕಾಂಗ್ರೆಸ್ ಪುನಶ್ಚೇತನ ಮಾಡಬೇಕು ಅಂದರೆ ಖಂಡಿತ ಜನ ನಿಮ್ಮನ್ನು ಕ್ಷಮಿಸಲ್ಲ. ಯಾವ ಬಾಯಲ್ಲಿ ಆಪಾದನೆ ಮಾಡುತ್ತಿದ್ದೀರಿ? ನಿಮ್ಮ ಬಳಿ ಏನು ದಾಖಲೆಯಿದೆ? ಭ್ರಷ್ಟಾಚಾರ ಆದರೆ ನಮ್ಮನ್ನು ನೇಣಿಗೆ ಹಾಕಿ ಅಂತ ಅವತ್ತೇ ಹೇಳಿದ್ದೇನೆ. ನಾವು ಯಾವುದೇ ತನಿಖೆಗೂ ಸಿದ್ಧ ಎಂದು ತಿಳಿಸಿದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ಒಟ್ಟು 16.16 ಲಕ್ಷದ ಕಾರ್ಮಿಕರಿಗೆ 5 ಸಾವಿರ ಹಾಕಿದ್ದು ಇದಕ್ಕಾಗಿ ಒಟ್ಟು 816.16 ಕೋಟಿ ಖರ್ಚಾಗಿದೆ. 76 ಕೋಟಿ ಉಳಿದ ಖರ್ಚು ಆಗಿದೆ. ಒಟ್ಟಾರೆ ಕಾರ್ಮಿಕ ಇಲಾಖೆಯಲ್ಲಿ 897 ಕೋಟಿ ಖರ್ಚಾಗಿದೆ ಎಂದರು.