Saturday, 17th August 2019

6ನೇ ಹಂತದಲ್ಲಿ ಶಾ ಹೇಳಿದ್ದ ಭವಿಷ್ಯ ನಿಜವಾಯ್ತು – ಯಾವ ಹಂತದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಶಾ 6ನೇ ಹಂತ ಚುನಾವಣೆ ಮುಗಿದ ಬಳಿಕ ಮೋದಿ ಜೊತೆ ಸುದ್ದಿಗೋಷ್ಠಿ ನಡೆಸಿ ಈಗಾಗಲೇ ನಾವು ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ತಲುಪಿದ್ದೇವೆ. ಈ ಬಾರಿ ಬಿಜೆಪಿ 300ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ಎಕ್ಸಿಟ್ ಪೋಲ್ ಗಳು ಬಿಜೆಪಿ ಒಂದೇ 300ಕ್ಕೂ ಅಧಿಕ ಸ್ಥಾನವನ್ನು ಪಡೆಯುತ್ತದೆ ಎಂದರೂ ರಾಜಕೀಯ ಪಂಡಿತರು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಎನ್‍ಎಡಿಎ ಮೈತ್ರಿ ಒಟ್ಟಾಗಿ 280-300 ಸ್ಥಾನಗಳನ್ನು ಗಳಿಸಬಹುದು ಎಂದು ಲೆಕ್ಕ ಹಾಕಿದ್ದರು. ಆದರೆ ಅಂತಿಮ ಫಲಿತಾಂಶ ಚಾಣಕ್ಯ ಅಮಿತ್ ಶಾ ಲೆಕ್ಕದಂತೆ ಪ್ರಕಟವಾಗಿದ್ದು ಬಿಜೆಪಿ ಸ್ಪರ್ಧಿಸಿದ್ದ 436 ಕ್ಷೇತ್ರಗಳಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿದೆ. 2014ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ ಅಲೆ ಸುನಾಮಿಯಾದ ಪರಿಣಾಮ 21 ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದೆ.

ಶಾ ಈಗಾಗಲೇ ನಾವು ಬಹುಮತ ಸಾಧಿಸಿದ್ದೇವೆ ಎಂದು ಮೇ 17 ರಂದು ಹೇಳಿದ ಹಿನ್ನೆಲೆಯಲ್ಲಿ ಯಾವ ಹಂತದಲ್ಲಿ ಬಿಜೆಪಿ ಎಷ್ಟು ಸ್ಥಾನವನ್ನು ಗೆದ್ದಿದೆ ಎನ್ನುವ ಪ್ರಶ್ನೆ ಎಳುವುದು ಸಹಜ. ಹೀಗಾಗಿ ಯಾವ ಹಂತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮೊದಲ ಹಂತ:
ಒಟ್ಟು 91 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ ಬಾರಿ ಈ ಕ್ಷೇತ್ರಗಳಲ್ಲಿ 32 ಸ್ಥಾನಗಳನ್ನು ಪಡೆದುಕೊಂಡಿತ್ತು. ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ 22 ಸ್ಥಾನಗಳನ್ನು ಗೆದ್ದಿದ್ದರೆ ಟಿಆರ್‍ಎಸ್ 9 ಸ್ಥಾನ, ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಚುನಾವಣಾ ದಿನಾಂಕ – ಏಪ್ರಿಲ್ 11
ಒಟ್ಟು ಮತದಾನ – 69.6%

ಎರಡನೇ ಹಂತ:
ಒಟ್ಟು 95 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. 2014 ಕ್ಕೆ ಹೋಲಿಸಿದರೆ 2 ಹೆಚ್ಚುವರಿ ಸ್ಥಾನ ಬಿಜೆಪಿಗೆ ಬಂದಿದೆ. ಒಟ್ಟಾಗಿ ಬಿಜೆಪಿ 69 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಚುನಾವಣಾ ದಿನಾಂಕ – ಏಪ್ರಿಲ್ 18
ಒಟ್ಟು ಮತದಾನ – 69.5%
ಒಟ್ಟು ಸ್ಥಾನ – 31+38 = 69

ಮೂರನೇ ಹಂತ:
116 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 67 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ವಿರೋಧ ಪಕ್ಷಗಳನ್ನು ಮಲಗಿಸಿಬಿಟ್ಟಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದರೆ, ಇತರೆ 19 ಸ್ಥಾನಗಳನ್ನು ಗೆದ್ದುಕೊಂಡಿದೆ.

ಚುನಾವಣಾ ದಿನಾಂಕ – ಏಪ್ರಿಲ್ 23
ಒಟ್ಟು ಮತದಾನ – 68.4%
ಒಟ್ಟು ಸ್ಥಾನ – 31+38+67= 136

ನಾಲ್ಕನೇಯ ಹಂತ:
ಒಟ್ಟು 71 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಗೆಲುವಿನ ಬುಟ್ಟಿಗೆ ಮೂರು ಹೆಚ್ಚುವರಿ ಕ್ಷೇತ್ರಗಳು ಬಂದಿವೆ. ಶಿವಸೇನೆ 9, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

ಚುನಾವಣಾ ದಿನಾಂಕ – ಏಪ್ರಿಲ್ 29
ಒಟ್ಟು ಮತದಾನ – 65.5%
ಒಟ್ಟು ಸ್ಥಾನ – 31+38+67+49 =185

ಐದನೇ ಹಂತ:
ಒಟ್ಟು 51 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಕ್ಷೇತ್ರಗಳಲ್ಲಿ ಜಯಗಳಿಸಿದೆ. 2014ರಲ್ಲಿ ಒಟ್ಟು 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಟಿಎಂಸಿ 4, ಕಾಂಗ್ರೆಸ್ 1 ಸ್ಥಾನವನ್ನು ಗೆದ್ದುಕೊಂಡಿದೆ. ಒಟ್ಟು 5ಹಂತದಲ್ಲಿ ಬಿಜೆಪಿ 272 ಸ್ಥಾನಗಳನ್ನು ಗಳಿಸಿಕೊಂಡಿರುವುದು ವಿಶೇಷ.

ಚುನಾವಣಾ ದಿನಾಂಕ – ಮೇ 6
ಒಟ್ಟು ಮತದಾನ – 64.4%
ಒಟ್ಟು ಸ್ಥಾನ – 31+38+67+49+41= 227

ಆರನೇ ಹಂತ:
45 ಕೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಒಟ್ಟು 59 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಲವು ಕಡೆ ಕ್ಲೀನ್ ಸ್ವೀಪ್ ಮಾಡಿದೆ. ಬಿಎಸ್‍ಪಿ 4, ಟಿಎಂಸಿ 4 ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ.

ಚುನಾವಣಾ ದಿನಾಂಕ – ಮೇ 12
ಒಟ್ಟು ಮತದಾನ – 64.4%
ಒಟ್ಟು ಸ್ಥಾನ – 31+38+67+49+42+45=272

ಏಳನೇ ಹಂತ:
ಕೊನೆಯ ಹಂತದ ಚುನಾವಣೆ 59 ಕ್ಷೇತ್ರಗಳಿಗೆ ನಡೆದಿತ್ತು. ಈ ಪೈಕಿ 31 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದ್ದರೆ ಟಿಎಂಸಿ 9, ಕಾಂಗ್ರೆಸ್ 9 ರಲ್ಲಿ ಗೆಲುವು ಪಡೆದುಕೊಂಡಿದೆ.

ಚುನಾವಣಾ ದಿನಾಂಕ – ಮೇ 19
ಒಟ್ಟು ಮತದಾನ – 65.2%
ಒಟ್ಟು ಸ್ಥಾನ – 31+38+67+49+42+45+31=303

ಪಕ್ಷವಾರು ಅಂತಿಮ ಫಲಿತಾಂಶ
ಬಿಜೆಪಿ – 303(+21)
ಕಾಂಗ್ರೆಸ್ – 52(+8)
ಇತರೆ – 187(-30)

ಮೈತ್ರಿ ಅಂತಿಮ ಫಲಿತಾಂಶ
ಎನ್‍ಡಿಎ – 349(+13)
ಯುಪಿಎ – 82(+22)
ಮಹಾ ಮೈತ್ರಿ – 15(+10)
ಇತರೆ – 96(-142)

ಶೇ.50ಕ್ಕೂ ಹೆಚ್ಚು ಮತ:
ಬಿಜೆಪಿ ಹಿಮಾಚಲ ಪ್ರದೇಶ, ಗುಜರಾತ್, ಉತ್ತರಾಖಂಡ್, ರಾಜಸ್ತಾನ, ಹರ್ಯಾಣ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ, ಗೋವಾ, ಛತ್ತೀಸಗಢ, ಜಾರ್ಖಂಡ್, ಚಂಡೀಗಢ, ಉತ್ತರಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಶೇ.50 ರಷ್ಟು ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ.

ಕಾಂಗ್ರೆಸ್ ಶೂನ್ಯ ಸಾಧನೆ.:
ಗುಜರಾತ್, ಹರಿಯಾಣ, ದೆಹಲಿ, ರಾಜಸ್ಥಾನ, ಜಮ್ಮುಕಾಶ್ಮೀರ, ಒಡಿಶಾ, ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಚಂಡೀಗಢ, ದಾದ್ರಾ ನಗರ್ ಹವೇಲಿ, ಡೀಯು ದಮನ್, ಲಕ್ಷದ್ವೀಪ, ತ್ರಿಪುರ, ಅಂಡಮಾನ್ ನಿಕೋಬಾರ್ ನಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.

Leave a Reply

Your email address will not be published. Required fields are marked *