Advertisements

ರೌಂಡಪ್ 2018- ಭಾರತ ಸಾಧಿಸಿದ್ದೇನು? ಏನೆಲ್ಲ ದುರಂತ ಸಂಭವಿಸಿದೆ? ಆರ್ಥಿಕ ವಲಯದಲ್ಲಿ ಏನಾಯ್ತು?

ಇಸ್ರೋ ಈ ವರ್ಷ ವಿಶೇಷ ಸಾಧನೆ ನಿರ್ಮಿಸಿದ್ದರೆ, ರಾಜಕೀಯದಲ್ಲಿ ಈ ವರ್ಷ ಪ್ರಧಾನಿ ಮೋದಿಗೆ ಮಿಶ್ರಫಲ ಸಿಕ್ಕಿದೆ. ತೈಲ ದರ ಏರಿಕೆ, ಇಳಿಕೆ ಕಾಣುತ್ತಿದ್ದರೆ ವರ್ಷದ ಕೊನೆಗೆ ಆರ್‍ಬಿಐ ಮತ್ತು ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಹೆಚ್ಚು ಸದ್ದು ಮಾಡಿದೆ. ಹೀಗಾಗಿ ಇಲ್ಲಿ ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್ ಘಟನೆಗಳ ಕಿರು ಮಾಹಿತಿಯನ್ನು ನೀಡಲಾಗಿದೆ.

Advertisements

ಕೇರಳ ಜಲಪ್ರಳಯ:
ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆಗಸ್ಟ್ ತಿಂಗಳ ಕಾಣಿಕೊಂಡ ಭಾರೀ ಮಳೆಯಿಂದಾಗಿ ಕೇರಳದ ಡ್ಯಾಂಗಳು ಅಪಾಯದ ಮಟ್ಟ ಮೀರಿದ್ದವು. ಅನಾಹುತ ತಪ್ಪಿಸುವ ಉದ್ದೇಶದಿಂದ ಆಗಸ್ಟ್ 9ರಂದು ಇಡುಕ್ಕಿ ಡ್ಯಾಂ ತೆರೆಯಲಾಗಿತ್ತು. 26 ವರ್ಷಗಳ ಇತಿಹಾಸದಲ್ಲಿ ಮೊದಲಬಾರಿಗೆ 54 ಡ್ಯಾಂಗಳನ್ನು ಒಟ್ಟಿಗೆ ತೆರೆಯಲಾಗಿತ್ತು. ಹೀಗಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಗಳ ಕೆಲವು ಪ್ರದೇಶಗಳು ಜಲಾವೃತವಾಗಿದ್ದವು. ಈ ಜಲಪ್ರಳಯದಿಂದಾಗಿ 483 ಜನ ಮೃತಪಟ್ಟಿದ್ದರೆ, 14 ಜನ ನಾಪತ್ತೆಯಾಗಿದ್ದಾರೆ. ಒಟ್ಟು 19,512 ಕೋಟಿ ರೂ. ಮೌಲ್ಯದ ಹಾನಿಯನ್ನು ಕೇರಳ ಅನುಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

Advertisements

ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ, ವೈಮಾನಿಕ ವೀಕ್ಷಣೆ ನಡೆಸಿದ್ದರು. ಮಳೆ ಮತ್ತು ಪ್ರವಾಹ ಶಾಂತವಾದ ಬಳಿಕ ಜನರು ತಮ್ಮ ನಿವಾಸಕ್ಕೆ ತೆರಳಿದರು. ಆಗ ಮನೆಯಲ್ಲಿ ಹಾವು, ಮೊಸಳೆಗಳು ಪತ್ತೆಯಾಗಿ ಜನರನ್ನು ಆತಂಕಕ್ಕೆ ಗುರಿ ಮಾಡಿತ್ತು. ಈ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತವೇ ಕಾರಣವೆಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಪಂಜಾಬ್ ರೈಲು ದುರಂತ:
ಅಮೃತಸರದ ಜೋದಾ ಪಾಟ್ಕರ್ ನಲ್ಲಿ ಅಕ್ಟೋಬರ್ 19ರಂದು ಈ ದುರ್ಘಟನೆ ನಡೆದಿತ್ತು. ವಿಜಯದಶಮಿಯ ನಿಮಿತ್ತ ನಡೆದಿದ್ದ ರಾವಣ ಸಂಹಾರದ ಕಾರ್ಯಕ್ರಮವನ್ನು ಸಾವಿರಾರು ಜನ ಹಳಿ ಮೇಲೆ ನಿಂತು ನೋಡುತ್ತಿದ್ದರು. ಈ ವೇಳೆ ರೈಲು ನುಗ್ಗಿದ ಪರಿಣಾಮ 61 ಮಂದಿ ಮೃತಪಟ್ಟಿದ್ದರೆ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ದುರಂತದಲ್ಲಿ ರಾವಣನ ವೇಷಧಾರಿಯಾಗಿದ್ದ ದಲ್ಬೀರ್ ಸಿಂಗ್ (24) ರೈಲು ಹಳಿಯ ಮೇಲೆ ನಿಂತಿದ್ದ ಜನರನ್ನು ದೂಡಿ ತನ್ನ ಪ್ರಾಣ ತ್ಯಾಗ ಮಾಡಿ 8 ಜನರು ಜೀವವನ್ನು ಉಳಿಸಿದ್ದರು.

Advertisements

ಏಕತಾ ಪ್ರತಿಮೆ:
ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅಕ್ಟೋಬರ್ 31ರಂದು ಅನಾವರಣಗೊಂಡಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ಈ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದಾರೆ.

ಇಸ್ರೋ ಮೈಲಿಗಲ್ಲು:
ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ 5,854 ಕೆ.ಜಿ. ತೂಕದ ಜಿಸ್ಯಾಟ್-11 ಹಾಗೂ ಮೂರು ಬಾರಿ ಏಕಕಾಲದಲ್ಲಿ 31 ಉಪಗ್ರಹಗಳ ಉಡಾವಣೆ ಮಾಡುವ ಮೂಲಕ 2018ರಲ್ಲಿ ಇಸ್ರೋ ಹೊಸ ಮೈಲುಗಲ್ಲುಗಳನ್ನು ನೆಟ್ಟಿದೆ. ಫ್ರೆಂಚ್ ಗಯಾನಾದಿಂದ ಏರಿಯಾನ್ 5 ರಾಕೆಟ್ ಮೂಲಕ ಭಾರೀ ತೂಕದ ಜಿಸ್ಯಾಟ್-11 ಉಪಗ್ರಹವನ್ನು ಡಿಸೆಂಬರ್ 5ರಂದು ಉಡಾವಣೆ ಮಾಡಲಾಗಿದೆ.

ಮೂರು ಬಾರಿ ಪಿಎಸ್‍ಎಲ್‍ವಿ-ಸಿ ರಾಕೆಟ್‍ಗಳ ಮೂಲಕ ಏಕಕಾಲದಲ್ಲಿ 31 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಧನೆಯನ್ನು ಇಸ್ರೋ ಮಾಡಿದೆ. ಜನವರಿ 12ರಂದು 31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ 40 ರಾಕೆಟ್ ನಭಕ್ಕೆ ಚಿಮ್ಮಿತ್ತು. ಈ ಮೂಲಕ ಮೊದಲ ಉಡಾವಣೆಯಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೆ ಜೂನ್ 23ರಂದು ಪಿಎಸ್‍ಎಲ್‍ವಿ-ಸಿ 38 ರಾಕೆಟ್ ಹಾಗೂ ನವೆಂಬರ್ 29ರಂದು 31 ಪಿಎಸ್‍ಎಲ್‍ವಿ-ಸಿ 43 ರಾಕೆಟ್‍ಗಳು 31 ಉಪಗ್ರಹ ಹೊತ್ತು ಬಾಹ್ಯಾಕಾಶಕ್ಕೆ ಹಾರಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದ್ದವು.

ವಿಧಾನಸಭೆ ಚುನಾವಣೆ:
ದೇಶದಲ್ಲಿ ಈ ಬಾರಿ 9 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿದ್ದು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಮಿಶ್ರಫಲ ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿ ಕಾಂಗ್ರೆಸ್‍ಗೆ ಭಾರೀ ಶಾಕ್ ನೀಡುತ್ತ ಮುನ್ನುಗ್ಗಿತ್ತು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್‍ಗೆ ಲಕ್ಕಿ ಕೀ ಸಿಕ್ಕಿದ್ದರಿಂದ ವರ್ಷದ ಕೊನೆಯಲ್ಲಿ ನಡೆದ ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.

ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ನಡೆದವು. ಈ ವೇಳೆ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿ, ನಾಗಾಲ್ಯಾಂಡ್‍ನಲ್ಲಿ ಎನ್‍ಡಿಪಿಪಿ ಜೊತೆಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಮೇಘಾಲಯದಲ್ಲಿ ಎನ್‍ಡಿಪಿ ಹಾಗೂ ಯುಡಿಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕಾಂಗ್ರೆಸ್ ಲಕ್ ಆರಂಭವಾಗಿದ್ದು ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ ಮೂಲಕ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಷ್ಟ್ರದ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿಸಿ ಮಹಾಘಟ್‍ಬಂಧನ್ ಮುನ್ನುಡಿ ಬರೆದಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ರಣತಂತ್ರ ಹೆಣೆಯಲು ನಿರ್ಧಾರ ಕೈಗೊಂಡಿದ್ದರು. ಇದಾದ ಬಳಿಕ ಪಂಚರಾಜ್ಯ ಚುನಾವಣೆಯನ್ನು ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದಲೇ ಕರೆಯಲಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಛತ್ತೀಸಗಡ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಉಳಿದಂತೆ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂನಲ್ಲಿ ಎಂಎನ್‍ಎಫ್ ಗೆದ್ದು ಬೀಗಿದವು. ಪಂಚರಾಜ್ಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು.

ಬುರಾರಿ ಸಾಮೂಹಿಕ ಆತ್ಮಹತ್ಯೆ:
ನವದೆಹಲಿಯ ಬುರಾರಿ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಜನರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಾರಂಭದಲ್ಲಿ ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಇಂತಹದ್ದೇ ಘಟನೆ ರಾಂಚಿಯಲ್ಲಿ ನಡೆದಿದ್ದು, ವ್ಯಾಪಾರದಲ್ಲಿ ನಷ್ಟವಾ ಗಿದೆ ಎಂದು ಪತ್ರ ಪರೆದು ಇಟ್ಟಿದ್ದ ವ್ಯಕ್ತಿ ಸೇರಿದಂತೆ ಕುಟುಂಬ ಆರು ಜನರು ಆತ್ಮಹತ್ಯೆ ಶರಣಾಗಿದ್ದರು.

ನಿಪಾ ವೈರಸ್:
ಕೇರಳದಲ್ಲಿ ಮೇ ತಿಂಗಳು ಕಾಣಿಸಿಕೊಂಡ ನಿಪಾ ವೈರಸ್ 17 ಜನರನ್ನು ಬಲಿಪಡೆದಿತ್ತು. ಕೇರಳ ನೆರೆಯ ರಾಜ್ಯಗಳಿಗೂ ತಟ್ಟುತ್ತದೆ ಎನ್ನುವ ಆತಂಕ ಸೃಷ್ಟಿಸಲಾಗಿತ್ತು. ಈ ಕುರಿತು ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ವೈರಸ್ ಪತ್ತೆ ಹಚ್ಚಿತ್ತು. ಆರಂಭದಲ್ಲಿ ಇದು ಬಾವಲಿಗಳಿಂದ ಹರಡುತ್ತದೆ ಎನ್ನಲಾಗಿತ್ತು. ಇದರಿಂದಾಗಿ ಅನೇಕ ಪ್ರದೇಶಗಳಲ್ಲಿ ಬಾವಲಿಗಳ ಮಾರಣಹೋಮವೇ ನಡೆಯಿತು. ಮೇ ಅಂತ್ಯದ ವೇಳೆ ನಿಪಾ ಪ್ರಕರಣಗಳು ನಿಯಂತ್ರಣಕ್ಕೆ ಬಂದವು. ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಲಿನಿ ಅವರು ಪತಿಗೆ ಬರೆದಿದ್ದ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬೋಗಿಬೀಲ್ ಸೇತುವೆ ಉದ್ಘಾಟನೆ:
ದೇಶದ ಅತ್ಯಂತ ಉದ್ದವಾದ ರಸ್ತೆ ಹಾಗೂ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25ರಂದು ಉದ್ಘಾಟಿಸಿದರು. ಈ ಬೋಗಿಬೀಲ್ ಸೇತುವೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಂಕುಸ್ಥಾಪನೆ ನೆರವೇರಿಸಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ.

ಆರ್ಥಿಕ ವಲಯಲ್ಲಿ ಏನಾಯಿತು?
ಬ್ಯಾಂಕ್ ವಿಲೀನ:
ರಾಷ್ಟ್ರೀಕೃತ ಬ್ಯಾಂಕ್‍ಗಳಾದ ವಿಜಯ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ದೇಶದ ಮೂರನೇ ದೊಡ್ಡ ಬ್ಯಾಂಕ್ ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಬ್ಯಾಂಕ್ ಒಕ್ಕೂಟವು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು.

ಆರ್‌ಬಿಐ- ಕೇಂದ್ರ ಜಟಾಪಟಿ:
ಬಡ್ಡಿ ದರ ನಿಗದಿ, ಆರ್‌ಬಿಐ ಮೀಸಲು ನಿಧಿಯ ಬಳಕೆ, ಸ್ವಾಯತ್ತತೆ ಇತ್ಯಾದಿ ವಿಚಾರವಾಗಿ ಗವರ್ನರ್ ಉರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆದಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ವೈಯಕ್ತಿಕ ಕಾರಣ ನೀಡಿ ಉರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್ ಅವರನ್ನು 24 ಗಂಟೆಗಳಲ್ಲಿ ಕೇಂದ್ರ ಸರ್ಕಾರ ನೇಮಿಸಿ ಆದೇಶ ಹೊರಡಿಸಿತ್ತು.

ಜಿಡಿಪಿಯಲ್ಲಿ ಏರಿಕೆ:
ಪ್ರತಿ ವರ್ಷದಂತೆ ವಿಶ್ವಸಂಸ್ಥೆಯ 22018ರ ಜುಲೈನಲ್ಲಿ ಪ್ರಕಟಿಸಿ ವರದಿಯ ಪ್ರಕಾರ, ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತ 6ನೇ ಬೃಹತ್ ಆರ್ಥಿಕತೆ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರದಿಯ ಪ್ರಕಾರ ಭಾರತದ ಜಿಡಿಪಿ ಮೌಲ್ಯವು 2.59 ಲಕ್ಷ ಕೋಟಿ ಡಾಲರ್ ಏರಿಕೆ ಕಂಡಿದೆ.

ವಿದೇಶಕ್ಕೆ ಪರಾರಿಯಾದವರು:
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಚಿಕ್ಕಪ್ಪ ಮೆಹಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 14,356 ಕೋಟಿ ರೂ. ವಂಚಿಸಿದ್ದ ಪ್ರಕರಣ 2018ರಲ್ಲಿ ದೇಶಕ್ಕೆ ಶಾಕ್ ಕೊಟ್ಟಿತ್ತು. ಈ ಇಬ್ಬರ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಆದರೂ ಭಾರತಕ್ಕೆ ಬಾರದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದರಿಂದಾಗಿ ನೀರವ್ ಒಡೆತನದ ದೇಶ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಭಾತರದ ವಿವಿಧ ಬ್ಯಾಂಕ್‍ಗಳಿಗೆ ವಂಚಿಸಿ 2016ರಿಂದ ಮದ್ಯದ ದೊರೆ ವಿಜಯ್ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಭಾರತಕ್ಕೆ ಕರೆತಲು ಇಡಿ ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ. ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿದೆ. ಇದಕ್ಕೂ ಮುನ್ನ ಎಚ್ಚೆತ್ತುಕೊಂಡಿದ್ದ ಮಲ್ಯ, ನಾನು ಪಡೆದ ಸಾಲದ ಸಂಪೂರ್ಣ ಹಣವನ್ನು ಪಾವತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ನೀರವ್ ಮೋದಿ, ಮೆಹಲ್ ಚೋಕ್ಸಿ ಹಾಗೂ ವಿಜಯ್ ಮಲ್ಯ ಸೇರಿದಂತೆ ಒಟ್ಟು 58 ವಿತ್ತ ಅಪರಾಧಿಗಳನ್ನು ಗಡಿಪಾರು ಮಾಡುವಂತೆ ಕೇಂದ್ರವು, ಯುಎಇ, ಅಮೆರಿಕ, ಈಜಿಪ್ತ್, ಅಂಟಿಗುವಾ ಒಳಗೊಂಡಂತೆ ವಿವಿಧ ದೇಶಗಳಿಗೆ ಮನವಿ ಸಲ್ಲಿಸಿದೆ.

ಹಾವು ಏಣಿಯಾಟವಾಡಿದ ತೈಲ ದರ:
ಡಾಲರ್ ಮುಂದೆ ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿತ್ತು. ಇದರ ಪರಿಣಾಮ ತೈಲ ಬೆಲೆಯ ಮೇಲು ಬೀರಿತು. ತೈಲ ಬೆಲೆ ಏರು ಪೇರು ಆಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಬೆಂಗಳೂರಿನ ಜನರು ಜನವರಿಯಲ್ಲಿ 71.06 ರೂ. ನೀಡಿ ಪಡೆಯುತ್ತಿದ್ದ ಒಂದು ಲೀಟರ್ ಪೆಟ್ರೋಲ್ ದರ ಸೆಪ್ಟೆಂಬರ್ ನಲ್ಲಿ 85 ರೂ. ಜಂಪ್ ಆಗಿತ್ತು. ಈ ದರ ಡಿಸೆಂಬರ್ ವೇಳೆಗೆ 71 ರೂ. ಆಸುಪಾಸು ಬಂದು ಗ್ರಾಹಕರ ಹೊರೆಯನ್ನು ತಗ್ಗಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Advertisements
Exit mobile version