Connect with us

Latest

ಹಾರ್ದಿಕ್ ಪಟೇಲ್‍ಗೆ 2 ವರ್ಷ ಜೈಲು

Published

on

ಗಾಂಧಿನಗರ: ಪಟೇಲ್ ಸಮುದಾಯ ಮೀಸಲಾತಿ ಹೋರಾಟದ ವೇಳೆ ಬಿಜೆಪಿ ಶಾಸಕರೊಬ್ಬರ ಕಚೇರಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಹಾರ್ದಿಕ್ ಪಟೇಲ್‍ಗೆ ಸ್ಥಳೀಯ ವಿಸ್ನಾನಗರ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಹಾರ್ದಿಕ್ ಪಟೇಲ್ ದೋಷಿ ಎಂದು ತೀರ್ಪು ನೀಡಿದೆ. 2015 ರಲ್ಲಿ ಮೀಸಲಾತಿ ಹೋರಾಟದ ಹೆಸರಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾಗಿದ್ದು ಹಾರ್ದಿಕ್ ಜೊತೆ ಪಟೇಲ್ ಸಮುದಾಯದ ಇಬ್ಬರು ನಾಯಕರಿಗೆ ಸಮಾನ ಶಿಕ್ಷೆಯಾಗಿದೆ.

ಏನಿದು ಪ್ರಕರಣ?
2015 ಪಟೇಲ್ ಸಮುದಾಯ ಮೀಸಲಾತಿ ನೀಡಲು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಗುಜರಾತಿನಲ್ಲಿ ಬೃಹತ್ ಹೋರಾಟ ನಡೆದಿತ್ತು. ಈ ವೇಳೆ 3 ರಿಂದ 4 ಸಾವಿರ ಹೋರಾಟಗಾರರು ಸ್ಥಳೀಯ ಬಿಜೆಪಿ ಶಾಸಕ ರುಷಿಕೇಶ್ ಪಟೇಲ್ ಕಚೇರಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿದಂತೆ ಹಾರ್ದಿಕ್ ಪಟೇಲ್ ಸೇರಿದಂತೆ 17 ಮಂದಿ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಬಂಧನ ಕೂಡ ಆಗಿತ್ತು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಹಾರ್ದಿಕ್ ಹೊರಬಂದಿದ್ದರು. ಈ ವೇಳೆ ಪ್ರಕರಣದಲ್ಲಿ ತೀರ್ಪು ತಮ್ಮ ಪರ ಬರುತ್ತದೆ ಎಂದು ಪಟೇಲ್ ಸಮುದಾಯದ ಮೀಸಲಾತಿ ಹೋರಾಟ ಕಾರ್ಯಕರ್ತರಿಗೆ ಆಶ್ವಾಸನೆ ನೀಡಿದ್ದರು. ಆದರೆ ಹೋರಾಟದ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಹಾರ್ದಿಕ್ ಪಟೇಲ್ ಗೆ ವಿಸ್ನಾನಗರ್ ಜಿಲ್ಲೆಯನ್ನು ಪ್ರವೇಶ ಮಾಡದಂತೆ ನಿಷೇಧ ಸಹ ವಿಧಿಸಿತ್ತು. ಬಳಿಕ ಗುಜರಾತ್ ಚುನಾವಣೆಯ ಸಮಯದಲ್ಲಿ ನಿಷೇಧವನ್ನು ತೆರವುಗೊಳಿಸಿತ್ತು.