ಬ್ಯಾಂಕ್‍ನಲ್ಲಿ ಇಲ್ಲ, ಎಟಿಎಂನಲ್ಲೂ ಸಿಗ್ತಿಲ್ಲ 2ಸಾವಿರ ರೂ. ನೋಟು

ಬೆಂಗಳೂರು: ಸದ್ದಿಲ್ಲದೆ ಎರಡು ಸಾವಿರ ನೋಟು ಬ್ಯಾನ್ ಆಗ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಯಾಕೆಂದರೆ ಎಟಿಎಂನಲ್ಲಿ 2 ಸಾವಿರ ಮುಖ ಬೆಲೆಯ ನೋಟು ಸಿಗ್ತಿಲ್ಲ ಎನ್ನುವ ಸುದ್ದಿಯ ಜೊತೆ, ಕೆಲವೆಡೆ 2 ಸಾವಿರ ನೋಟಿನ ಚಲಾವಣೆಯೂ ಸ್ಥಗಿತಗೊಂಡಿದೆ ಎನ್ನುವ ವಿಚಾರದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ನೋಟು ಅಮಾನ್ಯೀಕರಣ ಆಗಿ 3 ವರ್ಷಗಳು ಕಳೆದಿದೆ. 500, 1 ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಆದಾಗ ಜನಜೀವನ ಅಸ್ತವ್ಯಸ್ತವಾಗಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳೋದಕ್ಕೆ ತಿಂಗಳುಗಳೇ ಬೇಕಾಯ್ತು. ಇನ್ನೂ ನೋಟು ಅಮಾನ್ಯೀಕರಣ ಹೊಡೆತದಿಂದ ಹೊರ ಬರಲು ಸಾಧ್ಯವಾಗ್ತಿಲ್ಲ. ಇದರ ಬೆನ್ನಲ್ಲೇ ಈಗ ಇನ್ನೊಂದು ಶಾಕಿಂಗ್ ಸುದ್ದಿ ಹರಿದಾಡುತ್ತಿದ್ದು, 2 ಸಾವಿರ ರೂ. ನೋಟು ಕೂಡ ಬ್ಯಾನ್ ಆಗುವ ಮುನ್ಸೂಚನೆ, ಲಕ್ಷಣಗಳು ಕಾಣಸಿಗುತ್ತಿದೆ.

ಈಗಾಗಲೇ ಬಹುತೇಕ ಎಟಿಎಂನಲ್ಲಿ ಎರಡು ಸಾವಿರ ನೋಟು ಸಿಗುತ್ತಿಲ್ಲ ಅನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಇದರ ರಿಯಾಲಿಟಿ ಚೆಕ್ ಪಬ್ಲಿಕ್ ಟಿವಿ ನಡೆಸಿದೆ. ಬಸವೇಶ್ವರ ನಗರ ಸರ್ಕಲ್, ಲಗ್ಗೆರೆ ಕ್ರಾಸ್, ಮತ್ತಿಕೆರೆ, ಬಸವೇಶ್ವರ ನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವು ಕಡೆ ಎಂಟಿಎಂಗಳಲ್ಲಿ ಹಣ ತೆಗೆದು ಪರಿಶೀಲಿಸಿದಾಗ ಯಾವುದರಲ್ಲೂ 2 ಸಾವಿರ ಮುಖ ಬೆಲೆಯ ನೋಟು ಲಭ್ಯವಾಗಿಲ್ಲ.

ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯೂ ಇದೇ ಪರಸ್ಥಿತಿಯಾಗಿದೆ. ಈ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರ ಕೈಗೆ ಬರೀ 100, 500 ರೂ. ನೋಟುಗಳು ಮಾತ್ರ ಸಿಗುತ್ತಿವೆ. ಇದರಿಂದ ದೊಡ್ಡ ಮಟ್ಟದ ಹಣವನ್ನ ಡ್ರಾ ಮಾಡಿಕೊಂಡು ಹೋಗೋದಕ್ಕೆ ಸಮಸ್ಯೆಯಾಗುತ್ತಿದೆ ಅಂತ ಗ್ರಾಹಕರು ಹೇಳುತ್ತಿದ್ದಾರೆ.

ನೋಟು ಪ್ರಿಂಟಿಂಗ್ ಏನಾದರು ಕಡಿಮೆಯಾಗಿದೆಯಾ? ಇಲ್ಲಾ 2 ಸಾವಿರ ನೋಟ್ ಏನಾದರು ಬ್ಯಾನ್ ಆಗುತ್ತಾ ಎಂದು ಜನರು ಗೊಂದಲದಲ್ಲಿದ್ದು, ಮತ್ತೆ ನೋಟ್ ಬ್ಯಾನ್ ಭಯ ಜನಸಾಮಾನ್ಯರನ್ನು ಕಾಡಲು ಆರಂಭಿಸಿದೆ.

Leave a Reply

Your email address will not be published. Required fields are marked *