– ರೂಮಿನಲ್ಲಿ ಸಿಕ್ಕ ಎರಡು ಡೆತ್ನೋಟ್ ವಶ
– ಹಾಸಿಗೆ ಮೇಲೆ ಪತ್ನಿ, ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಪತ್ತೆ
ತಿರುವನಂತಪುರಂ: ಕೇವಲ ಎರಡು ತಿಂಗಳ ಹಿಂದೆ ಮದುವೆಯಾದ ನವ ದಂಪತಿ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಪಂಥಾಲಂ ಮೂಲದ ಜಿಥಿನ್ (27) ಮತ್ತು ಪತ್ನಿ ದೇವಿಕಾ ದಾಸ್ (20) ಎಂದು ಗುರುತಿಸಲಾಗಿದೆ. ಚೆನ್ನಿತಾಲದ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಥಿನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇವಿಕಾ ದಾಸ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.
Advertisement
Advertisement
ಏನಿದು ಪ್ರಕರಣ?
ಮೃತ ಜಿಥಿನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಮೇ 6 ರಂದು ಪಂಥಲಂನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಜಿಥಿನ್ ಮತ್ತು ದೇವಿಕಾ ದಾಸ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಎರಡು ವರ್ಷದ ಹಿಂದೆ ಇಬ್ಬರು ಓಡಿ ಹೋಗಿದ್ದರು. ಆಗ ದೇವಿಕಾ ದಾಸ್ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಪೊಲೀಸರು ಜಿಥಿನ್ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ನಂತರ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದರು.
Advertisement
Advertisement
ಈ ವೇಳೆ ಜಿಥಿನ್ ಜೊತೆ ಹೋಗಲು ಹುಡುಗಿ ಬಯಸಿದ್ದರಿಂದ ನ್ಯಾಯಾಲಯವು ಅವಳನ್ನು ಚೆರ್ಥಾಲಾ ಬಾಲಮಂದಿರದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಎರ್ನಾಕುಲಂನ ಖಾಸಗಿ ಮಾಲ್ನಲ್ಲಿ ದೇವಿಕಾ ದಾಸ್ ಕೆಲಸ ಮಾಡುತ್ತಿದ್ದಳು. ಅಂತಿಮವಾಗಿ ಈ ಜೋಡಿ ಎರಡು ತಿಂಗಳ ಹಿಂದೆ ವಿವಾಹವಾದರು. ಚೆನ್ನಿತಾಲಾದ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಜಿಥಿನ್ ಪೇಂಟಿಂಗ್ ಕೆಲಸಕ್ಕೆ ಹಾಜರಾಗದ ಕಾರಣ ಗುತ್ತಿಗೆದಾರ ಅವರ ಮನೆಗೆ ಭೇಟಿ ನೀಡಿದ್ದಾಗ ದಂಪತಿ ಮೃತಪಟ್ಟಿರುವ ಬಗ್ಗೆ ಗೊತ್ತಾಗಿದೆ. ತಕ್ಷಣ ಆತ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳೆಯ ಮುಖ, ಕುತ್ತಿಗೆ ಮತ್ತು ಮೊಣಕೈಯಲ್ಲಿ ರಕ್ತದ ಕಲೆಗಳಿದ್ದವು. ಹೀಗಾಗಿ ಮರಣೋತ್ತರ ನಂತರವೇ ಸಾವಿಗೆ ನಿಖರ್ ಕಾರಣ ತಿಳಿದುಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆಯಾದ ರೂಮಿನಲ್ಲಿ ಪೊಲೀಸರು ಎರಡು ಡೆತ್ನೋಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಪತ್ರದಲ್ಲಿ ಜಿಥಿನ್, ದೇವಿಕಾಳನ್ನು ಉದ್ದೇಶಿಸಿ ಬರೆದಿದ್ದಾನೆಂದು ಎನ್ನಲಾಗಿದೆ. ದಂಪತಿ ಆರ್ಥಿಕ ಸಮಸ್ಯೆಯಲ್ಲಿದ್ದು, ಜಿಥಿನ್ ಬಯಸಿದಂತೆ ಹೆಂಡತಿಗೆ ಉತ್ತಮ ಜೀವನವನ್ನು ನೀಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ನಾನು ಬಯಸಿದ ಜೀವನವನ್ನು ಪಡೆಯಲು ಸಾಧ್ಯವಾಗಿಲ್ಲ ಮತ್ತು ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಸಮಯವನ್ನು ಅನುಭವಿಸಿದೆ’ ಎಂದು ಮತ್ತೊಂದು ಡೆತ್ನೋಟಿನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.