Thursday, 17th October 2019

Recent News

ಗ್ಲಾಸ್ ಸ್ವಚ್ಛಗೊಳಿಸ್ತಿದ್ದಾಗ 10ನೇ ಮಹಡಿಯಿಂದ ಬಿದ್ದು ಕಾರ್ಮಿಕರಿಬ್ಬರು ಸಾವು

ನವದೆಹಲಿ: ವಿಡಿಯೋಕಾನ್ ಬೃಹತ್ ಕಟ್ಟಡದ 10ನೇ ಅಂತಸ್ತಿನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಕೆಳಗೆ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ರಾಜು ಶರ್ಮಾ(22) ಮತ್ತು ಅಶ್ತಿಯಾಕ್ ಖಾನ್(23) ಮೃತ ದುರ್ದೈವಿಗಳು. ಇಬ್ಬರು ಕಾರ್ಮಿಕರು ಕೇಂದ್ರ ದೆಹಲಿಯ ಭಾಗದಲ್ಲಿರುವ ವಿಡಿಯೋಕಾನ್ ಟವರ್‍ನ 10ನೇ ಅಂತಸ್ತಿನಲ್ಲಿ ಗ್ಲಾಸ್ ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಅವರು ಕುಳಿತಿದ್ದ ಸ್ಟ್ಯಾಂಡ್‍ನ ಹಗ್ಗ ತುಂಡಾಗಿದೆ. ಪರಿಣಾಮ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಈ ಇಬ್ಬರು ಕಟ್ಟಡದ ಹೊರಭಾಗದಲ್ಲಿ ಗ್ಲಾಸ್‍ಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕೆಲಸ ಮಾಡುತ್ತಿದ್ದಾಗ ಹೆಲ್ಮೆಟ್ ಹಾಗೂ ಭದ್ರತೆಯ ಬೆಲ್ಟ್ ಗಳನ್ನು ಧರಿಸಿರಲಿಲ್ಲ. ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಯಾವುದೇ ರೀತಿಯ ಭದ್ರತಾ ಸಾಮಾಗ್ರಿಗಳು ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಿದ್ದ ತಕ್ಷಣ ಅಶ್ತಿಯಾಕ್ ಹಾಗೂ ರಾಜು ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೇಲಿಂದ ಬಿದ್ದ ರಭಸಕ್ಕೆ ಇಬ್ಬರ ದೇಹದ ಮೂಳೆಗಳು ಮುರಿದಿದ್ದು, ಗಂಭೀರ ಗಾಯಗಳಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಟ್ಟಡದ ಸ್ವಚ್ಛತೆಯ ಹೊಣೆಯನ್ನು ಎಂಎಸ್ ಎಂಟರ್ ಪ್ರೈಸಸ್ ಕಂಪನಿಗೆ ವಹಿಸಲಾಗಿತ್ತು. ಸಾವನ್ನಪ್ಪಿದ ಯುವಕರು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದು, ಎಂಎಸ್ ಎಂಟರ್ ಪ್ರೈಸಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾವಿನ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *