Connect with us

Bellary

ರಾಜ್ಯದ ಅತಿ ದೊಡ್ಡ ಗಣಿ ಕಂಪನಿಯಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು

Published

on

– ಆತಂಕದಲ್ಲಿ ಗಣಿ ಕಂಪನಿಯ ಕಾರ್ಮಿಕರು

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿರುವ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54ಕ್ಕೇರಿಕೆಯಾಗಿದೆ.

ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ಸಿಎಂಬಿ ಸೆಂಟರ್ ನಲ್ಲಿ ಸದ್ಯ ಕೆಲಸ ಮಾಡುತ್ತಿದ್ದ 42 ವರ್ಷದ ಉದ್ಯೋಗಿಗೆ ಮಹಾಮಾರಿ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದ್ದು, ಸಹೊದ್ಯೋಗಿಗಳಲ್ಲಿ ಒಂದು ರೀತಿಯ ಆತಂಕ ಸೃಷ್ಠಿಯಾಗಿದೆ. ನಿನ್ನೆಯಷ್ಟೇ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಸದ್ಯ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ. 2ನೇ ಪ್ರಕರಣ ಅಧಿಕೃತ ವರದಿ ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರದ ಘೋಷಣೆ ಬಾಕಿಯಿದೆ.

ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ವ್ಯಕ್ತಿ ಯಾವುದೇ ಸ್ಥಾನಿಕ ಅಥವಾ ಹೋಂ ಕ್ವಾರಂಟೈನ್‍ನಲ್ಲಿರಲಿಲ್ಲ. ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಜಿಂದಾಲ್ ಕಂಪನಿಯಲ್ಲಿ ಇದುವರೆಗೆ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಜಿಂದಾಲ್ ಕಂಪನಿಯಲ್ಲಿ ಇತರೆ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.