Connect with us

Chamarajanagar

ಸುಳ್ವಾಡಿ ವಿಷ ಪ್ರಸಾದಕ್ಕೆ 14 ಬಲಿ – ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ

Published

on

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಲ್ಲಿವರೆಗೂ 14 ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ನರಳಾಡುತ್ತಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೃತರನ್ನು ಪಾಪಣ್ಣ(70), ಅನಿತಾ(12), ಶಾಂತರಾಜು(25), ಗೋಪಿಯಮ್ಮ(40), ಅಣ್ಣಯಪ್ಪತಮಡಿ(45), ರಾಚಯ್ಯ (35), ಕೃಷ್ಣನಾಯಕ್(50), ಶಿವು(35), ದೊಡ್ಡ ಮಾದಯ್ಯ(42), ಶಕ್ತಿ ವೇಲು(45) ಅವಿನಾಶ್(7) ಮೃತ ದುರ್ದೈವಿಗಳು.

ಮೈಸೂರಿನ ಕೆ. ಆರ್.ಆಸ್ಪತ್ರೆ, ಜೆಎಸ್‍ಎಸ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲೂ 40 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಬ್ಬರು ಮಕ್ಕಳು ಸೇರಿ 13 ಮಂದಿಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಅಸ್ವಸ್ಥರು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ದುರಂತ ಒಂದು ಕಡೆಯಾದರೆ ಬದುಕುಳಿದವರಿಗೆ ಚಿಕಿತ್ಸೆ ಕೊಡಿಸುವುದೇ ಸವಾಲಾಗಿ ಪರಿಣಮಿಸಿದೆ. ಕೊಳ್ಳೇಗಾಲ ತಾಲೂಕಾಸ್ಪತ್ರೆ ಕುಂದುಕೊರತೆಗಳ ಆಗರವಾಗಿದೆ. ಇಲ್ಲಿ ಯಾವುದೇ ಸೌಲಭ್ಯವಿಲ್ಲ, ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ ಅಂತ ಅಸ್ವಸ್ಥರ ಸಂಬಂಧಿಕರು ವೈದ್ಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳಲ್ಲಿ ಐವರನ್ನು ಶಿಫ್ಟ್ ಮಾಡಲಾಗಿದ್ದು, ಇನ್ನು 3 ಮಂದಿ ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಕೂಡ ಅಸ್ವಸ್ಥರನ್ನ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಗಳು ಬಂದರೆ ಅಲ್ಲಿ ವೆಂಟಿಲೇಟರ್ ಇಲ್ಲ. ಅಂಬ್ಯುಲೆನ್ಸ್ ಸಿಬ್ಬಂದಿ ಬಲೂನ್ ಊದಿ ಅಸ್ವಸ್ಥಗೊಂಡವರಿಗೆ ಕೃತಕ ಉಸಿರಾಟ ನೀಡಿದ್ದರು. ನಂತರ ಹೇಗೋ ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ಕರೆತಂದರೆ ಅಲ್ಲಿ ಸ್ಟ್ರಕ್ಚರ್ ಇಲ್ಲ. ಕುಟುಂಬಸ್ಥರೇ ಹೆಗಲುಕೊಟ್ಟು ಅಸ್ವಸ್ಥರನ್ನು ವಾರ್ಡ್ ಒಳಗೆ ಸೇರಿಸಿದ್ದರು. ಇನ್ನು ಕೆಲವರನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ದೇವಾಲಯ:
ಇನ್ನು ದುರಂತದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಪರಿಹಾರ:
ವಿಷಯ ತಿಳಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ, ಸಚಿವ ಸಿಎಸ್ ಪುಟ್ಟರಾಜು ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ದಾರೆ. ಮೃತರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಸಿಎಂ, ದೇವಾಲಯದಲ್ಲಿ ಇಂತಹ ಘಟನೆ ನಡೆದರೆ ಯಾರನ್ನ ನಂಬುವುದು. ಯಾರೇ ಇಂತಹ ಘಟನೆಗಳ ಹಿಂದೆ ಇದ್ದರೂ ಕಠಿಣ ಕ್ರಮ ಜರುಗಿಸುತ್ತೇವೆ. ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ವೆಚ್ಚವನ್ನ ಸರ್ಕಾರ ಭರಿಸುತ್ತೆ. ಮರಣ ಹೊಂದಿರುವವರ ಅಂತ್ಯಕ್ರಿಯೆಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.

https://www.youtube.com/watch?v=V_qoMhCwGNs

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv