Connect with us

Latest

ಅಮೇಜಾನ್, ಫ್ಲಿಪ್‍ಕಾರ್ಟ್ ವಿರುದ್ಧ 16ರ ಪೋರನಿಂದ ದೂರು

Published

on

ನವದೆಹಲಿ: ಅಮೇಜಾನ್, ಫ್ಲಿಪ್‍ಕಾರ್ಟ್ ಸೇರಿದಂತೆ ಇತರ ಆನ್‍ಲೈನ್ ಶಾಪಿಂಗ್ ತಾಣಗಳಿಗೆ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಿಸುವಂತೆ ಆದೇಶ ನೀಡಿ ಎಂದು 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‍ಜಿಟಿ)ಕ್ಕೆ ದೂರು ನೀಡಿದ್ದಾನೆ.

ದೆಹಲಿಯ ಮಾಡರ್ನ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿತ್ಯಾ ದುಬೆ ಎನ್‍ಜಿಟಿಗೆ ದೂರು ನೀಡಿದ್ದಾನೆ. ಅಮೇಜಾನ್, ಫ್ಲಿಪ್‍ಕಾರ್ಟ್ ಸೇರಿದಂತೆ ಇತರೆ ಇ-ಕಾಮರ್ಸ್ ಕಂಪನಿಗಳು ತಮ್ಮ ಸರಕುಗಳನ್ನು ಡೆಲಿವರಿ, ಪ್ಯಾಕ್ ಮಾಡಲು ಒಂದು ಬಾರಿ ಬಳಕೆಯ ಪ್ಲಾಸ್ಟಿಕ್‍ನ್ನು ವಿಪರೀತ ಪ್ರಮಾಣದಲ್ಲಿ ಉಪಯೋಗಿಸುತ್ತಿವೆ. ಅಲ್ಲದೆ ಬಹು ಪದರ ಹಾಗೂ ಬಬಲ್ಸ್ ಇರುವ ಪ್ಲಾಸ್ಟಿಕ್ ಬಳಸುತ್ತಿವೆ. ಇದರಿಂದ ಪರಿಸರಕ್ಕೆ ಭಾರೀ ಹಾನಿ ಸಂಭವಿಸುತ್ತಿದೆ ಎಂದು ದೂರು ನೀಡಿದ್ದಾನೆ.

ಯುವ ಪರಿಸರ ಪ್ರೇಮಿ ದುಬೆ ಈ ಕುರಿತು ಪ್ರತಿಕ್ರಿಯೆ ನೀಡಿ, ಅತಿಯಾದ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಈ ಕಂಪನಿಗಳಿಗೆ ನ್ಯಾಯಾಲಯದ ಮೂಲಕ ಸೂಚಿಸುವಂತೆ ಕಳೆದ ವಾರ ಎನ್‍ಜಿಟಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಪ್ಲಾಸ್ಟಿಕ್ ಸಮಸ್ಯೆಗೆ ಕಂಪನಿಗಳು ಜವಾಬ್ದಾರರಾಗಿರುವುದಿಲ್ಲ. ಹೀಗಾಗಿ ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

ಈ ಕಂಪನಿಗಳು ತಮ್ಮ ವಸ್ತುಗಳನ್ನು ಕಳುಹಿಸಿದಾಗಲೆಲ್ಲ, ವಸ್ತುಗಳು ಹಾಳಾಗದ ಸ್ಥಿತಿಯಲ್ಲಿ ಇದ್ದರೂ ಅದಕ್ಕೆ ರಟ್ಟಿನ ಪೆಟ್ಟಿಗೆಯಿಂದ ಪ್ಯಾಕ್ ಮಾಡುತ್ತಾರೆ. ಅಗತ್ಯವಿರುವ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು ರಟ್ಟಿನ ಪೆಟ್ಟಿಗೆ ಬಳಸುತ್ತಾರೆ. ಬಾಕ್ಸ್ ಮಾತ್ರವಲ್ಲದೆ ಪ್ಲಾಸ್ಟಿಕ್ ಕವರ್‍ನಿಂದ ಪ್ಯಾಕ್ ಮಾಡಿರುತ್ತಾರೆ. ಬಿಲ್ ಸಹ ಸಹ ಪ್ರತ್ಯೇಕ ಪ್ಲಾಸ್ಟಿಕ್ ಒಳಗಡೆ ಹಾಕಲಾಗುತ್ತದೆ ಎಂದು ದೂರಿದ್ದಾನೆ.

ಆನ್‍ಲೈನ್ ಶಾಪಿಂಗ್ ಗ್ರಾಹಕರಿಗೆ ತುಂಬಾ ಅನುಕೂಲವಾಗಿದೆ. ಸಮಯ ಉಳಿತಾಯ ಹಾಗೂ ಅವರಿಗೆ ಇಷ್ಟವಾದ ವಸ್ತುಗಳನ್ನು ಆನ್‍ಲೈನ್‍ನಲ್ಲಿಯೇ ಖರೀದಿಸುತ್ತಾರೆ. ಆದರೆ ಇದು ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಈ ಸವಾಲು ಸೃಷ್ಟಿಯಾಗಿರುವುದು ಯಾವುದೇ ಅಗತ್ಯತೆ, ಅನಿವಾರ್ಯತೆಯಿಂದಲ್ಲ. ಆದರೆ ಈ ಕಂಪನಿಗಳು ಅಳವಡಿಸಿಕೊಂಡಿರುವ ಬೇಜವಾಬ್ದಾರಿಯುತ ಅಭ್ಯಾಸದಿಂದಾಗಿ ಎಂದು ದುಬೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಕಳೆದ ಮೂರು ವರ್ಷಗಳಿಂದ ಪರಿಸರ ಆಧಾರಿತ ಅಭಿಯಾನಗಳನ್ನು ನಡೆಸುತ್ತಿದ್ದೇನೆ. ವಿಶೇಷವೆಂದರೆ ‘ಪ್ಲಾಂಟ್ ಎ ಮಿಲಿಯನ್ ಟ್ರೀ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ಲಾಸ್ಟಿಕ್ ಬಳಕೆ ಕುರಿತು ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಎರಡಕ್ಕೂ ಟ್ವೀಟ್ ಮಾಡಿದ್ದೇನೆ. ಆದರೆ 16 ವರ್ಷದ ಬಾಲಕ ಟ್ವೀಟ್ ಅನ್ನು ಯಾರು ನೋಡುತ್ತಾರೆ ಎಂದು ದುಬೆ ಪ್ರಶ್ನಿಸಿದ್ದಾನೆ.

ಮಾರ್ಚ್ 2021ರ ಹೊತ್ತಿಗೆ ನಮ್ಮ ಪ್ಯಾಕೇಜಿಂಗ್‍ನಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್‍ನ್ನು ತೆಗೆದುಹಾಕುವ ಕುರಿತು ಈಗಾಗಲೇ ನಿರ್ಧರಿಸಿದ್ದೇವೆ. ಈ ವರ್ಷದ ಆಗಸ್ಟ್ ವೇಳೆಗೆ ಶೇ.25ರಷ್ಟು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ಕಡಿತಗೊಳಿಸಿದ್ದೇವೆ. ಎಂದು ಫ್ಲಿಪ್‍ಕಾರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ್ದು, 2022ರ ವೇಳೆಗೆ ದೇಶಾದ್ಯಂತ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಹ ತಮಿಳುನಾಡಿನ ಮಾಮಲ್ಲಾಪುರಂ ಕಡಲ ತೀರದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಹೆಕ್ಕುವ ಮೂಲಕ ಗಮನ ಸೆಳೆದಿದ್ದರು.