16 ದಿನ ಊಟ, ಸ್ನಾನವಿಲ್ಲದೆ ಕೆಚ್ಚೆದೆಯ ಹೋರಾಟ – ಕಾರ್ಗಿಲ್ ಗೆದ್ದು ಬಂದ ಸೇನಾನಿಯ ರೋಚಕ ಕಥೆ

– ನಮ್ಮ ಸೈನಿಕರ ಛಿದ್ರ ಛಿದ್ರ ದೇಹ ನೋಡಿ 49 ಪಾಕಿಗಳನ್ನು ಹೊಡೆದುರುಳಿಸಿದ್ದ ಕರಾವಳಿ ಸೈನಿಕ

ಮಂಗಳೂರು: ಭಾರತದ ಹೆಬ್ಬುಲಿಗಳ ಅಟ್ಟಹಾಸಕ್ಕೆ ಪತರುಗುಟ್ಟಿದ ಪಾಕಿಸ್ತಾನ ಕಾರ್ಗಿಲ್ ಬಿಟ್ಟು ಓಡಿಹೋಗಿ 21 ವರ್ಷಗಳು ಕಳೆದಿವೆ. ಭಾರತೀಯ ಯೋಧರ ಧೈರ್ಯ, ಸಾಹಸ, ದೇಶಪ್ರೇಮದ ಪ್ರತೀಕವಾಗಿ ಕಾರ್ಗಿಲ್ ಭಾರತದಲ್ಲೇ ಉಳಿದಿದೆ. ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರುತ್ತಿದೆ.

ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಕಥೆಯೇ ರೋಮಾಂಚನಕಾರಿ ಯಾದರೆ, ಯುದ್ಧದಲ್ಲಿ ಗೆದ್ದು, ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿಗಳ ಹೋರಾಟ ಅದೊಂದು ಇತಿಹಾಸ. ಇಂತಹ ವೀರ ಸೇನಾನಿಗಳ ಪೈಕಿ ಕರಾವಳಿಯಲ್ಲಿ ಹೆಮ್ಮೆಯ ಯೋಧ ಪ್ರವೀಣ್ ಶೆಟ್ಟಿ ಕೂಡಾ ಒಬ್ಬರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಿಶ್ವದ ಏಕೈಕ 244 ಹೆವಿ ಮೋರ್ಟಾರ್ ರೆಜಿಮೆಂಟ್‍ನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರಿನ ಕುಂಪಲ ನಿವಾಸಿ ಪ್ರವೀಣ್ ಶೆಟ್ಟಿ, ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಇದನ್ನು ಓದಿ: ಏನಿದು ಕಾರ್ಗಿಲ್ ವಿಜಯ್ ದಿವಸ್?

- Advertisement -

18 ವರ್ಷದಲ್ಲೇ ಸೇನೆ ಸೇರಿದ ಪ್ರವೀಣ್ ಶೆಟ್ಟಿ ಸೇನೆ ಸೇರಿದ ಎರಡು ವರ್ಷದಲ್ಲೇ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಊರಿಗೆ ಬಂದ ದಿನವೇ ಸೇನೆಯಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ಬಂತು. ಹಾಗಾಗಿ ತಕ್ಷಣವೇ ಮತ್ತೆ ಕರ್ತವ್ಯಕ್ಕೆ ತೆರಳಿದ ಪ್ರವೀಣ್ ಶೆಟ್ಟಿ ಎದುರಿದ್ದದ್ದು ಬರೀ ಹೆಣಗಳ ರಾಶಿ. ತನ್ನ ರೆಜಿಮೆಂಟ್‍ನಲ್ಲಿದ್ದವರ ಛಿದ್ರ ಛಿದ್ರವಾದ ಹೆಣಗಳನ್ನು ನೋಡಿ ಒಂದು ಕ್ಷಣ ಕಂಗಾಲಾದರೂ ಮತ್ತೆ ಹೋರಾಡಿದ ರೀತಿ ಮಾತ್ರ ಆಶ್ಚರ್ಯಕಾರಕ. 16 ದಿನ ಊಟ, ಸ್ನಾನವಿಲ್ಲದೆ ಕೆಚ್ಚೆದೆಯಿಂದ ಹೋರಾಡಿದ್ದಾರೆ.

- Advertisement -

ಯುದ್ಧ ಭೂಮಿಯ ಅತೀ ಮುಖ್ಯಭಾಗದ ಕಾರ್ಗಿಲ್‍ನ ತೊಲೊಲಿಂಗ್ ಪ್ರದೇಶವನ್ನು ಪ್ರವೀಣ್ ಶೆಟ್ಟಿ ತಂಡ ವಶಪಡಿಸಿಕೊಂಡಿತು. ತನ್ನ ಜೊತೆ ಇದ್ದವರು ತನ್ನೆದುರೇ ಹುತಾತ್ಮರಾದರೂ ಛಲ ಬಿಡದ ಪ್ರವೀಣ್ ಶೆಟ್ಟಿ ತಂಡ 49 ಶತ್ರುಗಳ ರುಂಡ ಚೆಂಡಾಡಿ ಪರಾಕ್ರಮ ಮೆರೆದಿದ್ದರು. ತೊಲೊಲಿಂಗ್ ಪರ್ವತ ಮಾತ್ರವಲ್ಲದೆ, ಟೈಗರ್ ಹಿಲ್ ಮುತಾಂದ ಪರ್ವತ ಶ್ರೇಣಿಗಳಲ್ಲೂ ಪ್ರವೀಣ್ ಶೆಟ್ಟಿ ತಂಡ ಹೋರಾಡಿದೆ. 16 ವರ್ಷಗಳ ಕಾಲ ದೇಶ ಸೇವೆ ಮಾಡಿದ ಪ್ರವೀಣ್, 11 ವರ್ಷ ಕಾಶ್ಮೀರದಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ.

8 ಸೇನಾ ಸೇವಾ ಪದಕಗಳನ್ನು ಗಳಿಸಿದ್ದಾರೆ. 9 ವರ್ಷದ ಸೇನಾ ಪದಕ, 50 ವರ್ಷದ ಸೇನಾ ಪದಕ, ಫೀಲ್ಡ್ ಸೇನಾ ಪದಕ, ಡಬಲ್ ಫೀಲ್ಡ್ ಸೇನಾ ಪದಕ, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್, ಆಪರೇಷನ್ ವಿಜಯ್ ಸ್ಟಾರ್ ಎಂಬ ಪದಕಗಳನ್ನು ಗಳಿಸಿದ್ದಾರೆ. ಆಪರೇಷನ್ ವಿಜಯ್ ಸ್ಟಾರ್ ಪದಕ ಗಳಿಸಿದ ಕರಾವಳಿ ಕರ್ನಾಟಕದ ಏಕೈಕ ಯೋಧ ಎಂಬ ಹೆಗ್ಗಳಿಕೆ ಪ್ರವೀಣ್ ಶೆಟ್ಟಿ ಪಾತ್ರರಾಗಿದ್ದಾರೆ. 15 ವರ್ಷಗಳ ಸೇನಾ ಸೇವೆ ಬಳಿಕ ಮಂಗಳೂರಿನ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಪ್ರವೀಣ್ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಯುದ್ಧ ಭೂಮಿಯಲ್ಲಿ ಪರಾಕ್ರಮ ಮೆರೆದ ಕರಾವಳಿಯ ಈ ಯೋಧ, ಕರ್ತವ್ಯ ಸಂದರ್ಭದಲ್ಲಿ ದೇಹದ ಅಂಗಾಂಗಳಿಗೆ ಮಾರಣಾಂತಿಕವಾದ ಗಾಯವಾದರೂ ಪಟ್ಟು ಬಿಡದೆ ಹೋರಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಪ್ರವೀಣ್ ಶೆಟ್ಟಿ ಯವರ ಕೆಚ್ಚೆದೆಯ ಹೋರಾಟಕ್ಕೆ ಈ ಸಂದರ್ಭದಲ್ಲಿ ನಮ್ಮದೊಂದು ಸಲಾಂ.

- Advertisement -