Recent News

ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

Leave a Reply

Your email address will not be published. Required fields are marked *