ಬೆಂಗಳೂರು: ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಯನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುರಿಸಿದ್ದರು. ಆದ್ರೆ ಆಪರೇಷªನ್ ಕಮಲದ ಮೂಲಕ ಮೈತ್ರಿ ಸರ್ಕಾರ ಪತನಗೊಳಿಸಿದ್ದ ಬಿಜೆಪಿ ವಿರುದ್ಧ ಸಾಫ್ಟ್ ಕಾರ್ನರ್ ತೋರಿದ್ದು ಸದ್ಯ ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕುಮಾರ ‘ಕಮಲ’ ಪ್ರೀತಿ: ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ಈ ರೀತಿಯ ಸುದ್ದಿಗೋಷ್ಠಿಗಳ ಮೂಲಕ ಪ್ರಾದೇಶಿಕ ಪಕ್ಷವಾಗಿ ಪರೋಕ್ಷ ಬೆಂಬಲ ನೀಡುತ್ತಿರುವ ಸಂದೇಶ ರವಾನಿಸುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಅಂದ್ರೆ ಮಂಡ್ಯ ಡಿಸಿಸಿ ಬ್ಯಾಂಕ್ ಮತ್ತು ಬೈ ಎಲೆಕ್ಷನ್‍ಗೆ ಮುನ್ನ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದರು.
ಸಾಫ್ಟ್ ಕಾರ್ನರ್ ತೋರಿಸುವ ಮೂಲಕ ಸರ್ಕಾರದ ಮಟ್ಟದಲ್ಲಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳಬಹುದು ಮತ್ತು ತಮ್ಮ ಶಾಸಕರು ಕೈ ತಪ್ಪಿ ಹೋಗದಂತೆ ಅನುದಾನ ಕೊಡಿಸಲು ಇರಬಹುದು ಎನ್ನಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಎದುರಾಳಿ ಅಂತ ಬಿಂಬಿಸುವ ಪ್ರಯತ್ನಗಳಿರಬಹುದು. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಬಿಜೆಪಿ ಜೊತೆಗೆ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಕುಮಾರಸ್ವಾಮಿ ಇರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ.
ಕುಮಾರಸ್ವಾಮಿ ಸತ್ಯ ಸಂಗತಿಗಳನ್ನ ಹೇಳುತ್ತಿದ್ದಾರೆ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಕೆಟ್ಮೇಲೆ ಬುದ್ದಿ ಬಂದ್ರೆ ಹೇಗೆ? ನಿಮ್ಮ ನಿಲುವು ಹೀಗೇ ಇರಲಿ. ಚಂಚಲ ಆಗಬೇಡಿ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿವಿದಿದ್ದಾರೆ. ಇನ್ನು ಡಿಸಿಎಂ ಅಶ್ವಥ್ ನಾರಾಯಣ ಅವರು, ಬಿಜೆಪಿ ಜತೆ ಬಂದಿದ್ರೆ ಸಿಎಂ ಆಗ್ತಿರಲಿಲ್ಲ. ಯಡಿಯೂರಪ್ಪ ಇರಬೇಕಾದ್ರೆ ನಾವೇಕೆ ಸಿಎಂ ಸ್ಥಾನ ಬಿಟ್ಟು ಕೊಡ್ತಿದ್ದೇವು ಅಂದಿದ್ದಾರೆ. ಜೆಡಿಎಸ್‍ನಿಂದ ಬಿಜೆಪಿಗೆ ಹಾರಿ ಸಚಿವರಾಗಿರೋ ಗೋಪಾಲಯ್ಯ ಕೂಡ ಕುಮಾರಸ್ವಾಮಿ ನೋವು ಅನುಭವಿಸಿದ್ದು ನಿಜ ಅಂದಿದ್ದಾರೆ.