ಹೊಸ ಅಧ್ಯಕ್ಷ, ವಿರೋಧ ಪಕ್ಷದ ನಾಯಕರ ನಡುವೆ ಸ್ಪರ್ಧೆ ನಡೀತಿದೆ: ಸುರೇಶ್ ಕುಮಾರ್

– ಕಾಂಗ್ರೆಸ್ ನಾಯಕರಿಗೆ ಲೆಕ್ಕ ಕಲಿಸಿದ್ಯಾರು?

ಚಾಮರಾಜನಗರ: ಕೆಲವರಿಗೆ ದಿನಾ ಬೆಳಿಗ್ಗೆ ಎದ್ದ ತಕ್ಷಣ ಹಗರಣಗಳೇ ಕಾಣುತ್ತವೆ. ಅವರಿಗೆ ಸೂರ್ಯ ಉದಯವಾಗುವುದು ಕಾಣುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಟಾಂಗ್ ನೀಡಿದ್ದಾರೆ.

ಕೊರೊನಾ ಚಿಕಿತ್ಸೆ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಗಳ ಬಗ್ಗೆ ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಒಳ್ಳೆ ಸಂಗತಿಗಳು ಕಾಣುವುದಿಲ್ಲ, ಕೇಳುವುದಿಲ್ಲ, ಒಳ್ಳೆ ಸಂಗತಿಗಳ ಬಗ್ಗೆ ಮಾತನಾಡುವುದೂ ಇಲ್ಲ ಎಂದು ಹೇಳಿ ವಾಗ್ದಾಳಿ ಮಾಡಿದರು.

- Advertisement -

ಕಾಂಗ್ರೆಸ್ಸಿನಲ್ಲಿ ಹೊಸ ಅಧ್ಯಕ್ಷರು ನೇಮಕವಾದ ನಂತರ ಪ್ರತಿಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಕಾಂಪಿಟೇಷನ್ ಶುರುವಾಗಿದೆ. ನಾವೇ ಸ್ಟ್ರಾಂಗು ಎಂದು ತೋರಿಸಿಕೊಳ್ಳಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾರು ಜಾಸ್ತಿ ಬೈಯುತ್ತಾರೋ ಅವರೇ ಸ್ಟ್ರಾಂಗು ಅಂದುಕೊಂಡಿದ್ದಾರೆ. ಸರ್ಕಾರ ಉಪಕರಣಗಳನ್ನು ಖರೀದಿ ಮಾಡಿರುವುದೇ 400 ರಿಂದ 480 ಕೋಟಿ ರೂಪಾಯಿಗೆ ಎರಡು ಸಾವಿರ ಕೋಟಿ ಅವ್ಯವಹಾರ ಹೇಗಾಗುತ್ತದೆ. ಅವರಿಗೆ ಲೆಕ್ಕ ಕಲಿಸಿದ್ಯಾರು ಎಂದು ಹರಿಹಾಯ್ದರು. ಇದನ್ನು ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

- Advertisement -

ಇದೇ ವೇಳೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾಳೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ಸುರೇಶ್ ಕುಮಾರ್ ಅವರು, ನಮ್ಮ ಸರ್ಕಾರ ಮೊದಲ ಆರು ತಿಂಗಳು ಮಳೆ, ಪ್ರವಾಹದಂತಹ ವಿಪತ್ತು ಎದುರಿಸುವುದರಲ್ಲೇ ಕಳೆದಿದೆ. ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಇಡೀ ರಾಜ್ಯ ಪ್ರವಾಸ ಮಾಡಿದರು ವಿಪತ್ತು ನಿಯಂತ್ರಣಕ್ಕೆ ಕ್ರಮ ಕೈಗೊಂಡರು ಎಂದರು.

ಪ್ರವಾಹ ಆದ ನಂತರ ಕೊರೊನಾ ಸಂಕಷ್ಟ ಎದುರಾಯ್ತು, ಯಡಿಯೂರಪ್ಪ ಯುವಕರನ್ನು ನಾಚಿಸುವಂತೆ ಓಡಾಟ ನಡೆಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜ್ಯದ ಜನತೆ ಯಡಿಯೂರಪ್ಪ ತೋರಿಸಿದ ಧೈರ್ಯ ಹಾಗೂ ಛಲವನ್ನು ಮೆಚ್ಚಿದ್ದಾರೆ ಎಂದು ಪ್ರಶಂಸೆ ಮಾಡಿದರು.

- Advertisement -