ಹಾಸನ: ಚಿಕ್ಕ ಮಕ್ಕಳು ಔಷಧಿ ನೀಡಿದರೆ ಕುಡಿಯಲ್ಲ. ಆರಂಭದಲ್ಲಿ ಏನಾಗುತ್ತೋ ಎಂಬ ಭಯ ಕಾಡಿತ್ತು ಆದರೆ ವೈದ್ಯರ ಸೇವೆಯಿಂದ ಗುಣಮುಖರಾಗಿದ್ದೇವೆ ಎಂದು ಕೊರೊನಾ ಗೆದ್ದು ಬಂದವರು ಭಾವುಕರಾಗಿ ವೈದ್ಯಕೀಯ ಸಿಬ್ಬಂದಿಗೆ ಕೈಮುಗಿದು ಗೌರವ ಸಲ್ಲಿಸಿದ ಸನ್ನಿವೇಶ ಹಾಸನದಲ್ಲಿ ಕಂಡು ಬಂದಿತ್ತು.
ಕೊರೊನಾದಿಂದ ಗುಣಮುಖರಾದ 29 ಜನರನ್ನು ಹಾಸನದ ಹಿಮ್ಸ್ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದರು. ಕೊರೊನಾದಿಂದ ಗುಣಮುಖರಾಗಿ ಬಂದವರಿಗೆ ಹೂ ಕೊಟ್ಟು, ಚಪ್ಪಾಳೆ ತಟ್ಟಿ ಆತ್ಮಸ್ಥೈರ್ಯ ತುಂಬಲಾಯಿತು.
Advertisement
ಮನೆಗೆ ತೆರಳುವ ಮುನ್ನ ಮಾತನಾಡಿದ ಕೊರೊನಾ ವಿನ್ನರ್ಸ್, ನಮ್ಮನ್ನು ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡರು. ಕೊರೊನಾವನ್ನು ನಾವು ಹೆದರಿಸಬೇಕು. ನಾವು ಕೊರೊನಾಕ್ಕೆ ಹೆದರಬಾರದು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾತನಾಡಿ, ವೈದ್ಯರಿಗೆ ನಿಜವಾದ ಖುಷಿ ಸಿಗುವುದು ನಾವು ಚಿಕಿತ್ಸೆ ಮಾಡಿದವರು ಗುಣಮುಖರಾದಾಗ. ಇವತ್ತು ಕೊರೊನಾ ಸೋಂಕಿತರು ಸಂಭ್ರಮಿಸುತ್ತಿರುವುದರಿಂದ ಎರಡು ಪಟ್ಟು ಸಂತೋಷ ಆಗುತ್ತಿದೆ ಎಂದರು.