ಹಾಸನದಲ್ಲಿ ಕೊರೊನಾಗೆ ಒಂದೇ ದಿನ 6 ಮಂದಿ ಬಲಿ

ಹಾಸನ: ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವಾಡುತ್ತಿದ್ದು, ಕೊರೊನಾ ಸೋಂಕಿಗೆ ಇಂದು 6 ಜನ ಮೃತಪಟ್ಟಿದ್ದಾರೆ. ಇದುವರೆಗೆ ಮಹಾಮಾರಿಗೆ ಒಟ್ಟು 60 ಮಂದಿ ಬಲಿಯಾಗಿದ್ದಾರೆ.

- Advertisement -

ಅರಸೀಕೆರೆ ತಾಲೂಕಿನ 55 ವರ್ಷದ ಮಹಿಳೆ, 60 ವರ್ಷದ ಒಬ್ಬ ವ್ಯಕ್ತಿ ಉಸಿರಾಟದ ತೊಂದರೆಯಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ 26 ವರ್ಷದ ಮಹಿಳೆ, 68 ವರ್ಷದ ವ್ಯಕ್ತಿ, 52 ವರ್ಷದ ವ್ಯಕ್ತಿ ಹಾಗೂ 50 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ 97 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,030 ಕ್ಕೆ ಏರಿಕೆಯಾಗಿದೆ. ಇಂದು 16 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 901 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1069 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಇಂದು ಪತ್ತೆಯಾದ 97 ಪ್ರಕರಣಗಳಲ್ಲಿ 14 ಜನ ಅರಸೀಕೆರೆ, 17 ಮಂದಿ ಚನ್ನರಾಯಪಟ್ಟಣ, 32 ಜನ ಹಾಸನ, 14 ಜನ ಹೊಳೆನರಸೀಪುರ, ಆಲೂರು ತಾಲೂಕಿನಲ್ಲಿ ಒಬ್ಬರು, 7 ಜನ ಅರಕಲಗೂಡು, 11 ಜನ ಬೇಲೂರು ತಾಲೂಕಿನವರಾಗಿದ್ದಾರೆ. ಅಲ್ಲದೆ ಹೊರ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

- Advertisement -