Connect with us

Chikkamagaluru

ಹಾಸನದ ಬಳಿಕ ಕಾಫಿನಾಡಿನ ಹೋಂ ಸ್ಟೇ, ರೆಸಾರ್ಟ್ ಬಂದ್

Published

on

ಚಿಕ್ಕಮಗಳೂರು: ಹಾಸನ, ಕೊಡಗು ಬಳಿಕ ಚಿಕ್ಕಮಗಳೂರಿನ ಹೋಂ ಸ್ಟೇ ಮತ್ತು ರೆಸಾರ್ಟ್ ಗಳು ಬಂದ್ ಮಾಡಲಾಗಿದೆ

ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಲೇ ಇದೆ. ಜನಸಾಮಾನ್ಯರು ತೀವ್ರ ಆತಂಕಕ್ಕೀಡಾಗಿ ಕೊರೊನಾ ಭಯದಲ್ಲೇ ಬದುಕುತ್ತಿದ್ದಾರೆ. ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಕಾಫಿನಾಡಲ್ಲಿ ಒಂದೇ ಒಂದು ಪ್ರಕರಣ ಇರಲಿಲ್ಲ. ಆದರೆ ಲಾಕ್‍ಡೌನ್ ಸಡಿಲಗೊಂಡ ಮೇಲೆ ಕಾಫಿ ನಾಡಿನಲ್ಲಿ ಒಂದೇ ತಿಂಗಳಿಗೆ ಸೋಂಕಿತರ ಸಂಖ್ಯೆ 81ಕ್ಕೇ ಏರಿದೆ.

ಕೊರೊನಾ ನಡುವೆಯೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿರೋ ಪ್ರವಾಸಿಗರನ್ನ ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಸರ್ಕಾರ ಪ್ರವಾಸಿಗರನ್ನ ನಿರ್ಬಂಧಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆ ನಿನ್ನೆ ಜಿಲ್ಲೆಯ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಂಘ ಸಭೆ ಸೇರಿ ಜುಲೈ 31ರವರಗೆ ಹೋಂಸ್ಟೇ ಹಾಗು ರೆಸಾರ್ಟ್‍ಗಳನ್ನ ಬಂದ್ ಮಾಡುವಂತೆ ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ ಐದು-ಹತ್ತು ಕೇಸ್‍ಗಳು ಬರುತ್ತಿದ್ದು ಜನ ಕಂಗಾಲಾಗಿದ್ದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಬಂದ ಬಹುತೇಕ ಪ್ರಕರಣಗಳಿಗೆ ಬೆಂಗಳೂರಿನ ನಂಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರೋ ಬಹುತೇಕರಲ್ಲಿ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯ ಜನರನ್ನ ಮತ್ತಷ್ಟು ಕಂಗಾಲಾಗಿಸಿತ್ತು. ಈ ಹಿನ್ನೆಲೆ ಸ್ಥಳೀಯ ಯುವಕರು ಪ್ರವಾಸಿಗರನ್ನು ಭೇಟಿ ನೀಡಿ ಕೊರೊನಾ ಕಡಿಮೆಯಾಗೋವರೆಗೂ ಬರಬೇಡಿ ಎಂದು ಮನವಿ ಮಾಡಿದ್ದರು. ತಾಲೂಕು ಹಾಗೂ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರು. ಗ್ರಾಮೀಣ ಭಾಗದ ಜನ ಗ್ರಾಮ ಪಂಚಾಯಿತಿಗಳಿಗೆ ಲಿಖಿತ ದೂರು ನೀಡಿದ್ದರು.

ಈ ಹಿನ್ನೆಲೆ ಜನರ ಭಯ ಅರಿತ ಮಾಲೀಕರು ಜುಲೈ ತಿಂಗಳಲ್ಲಿ ತಮ್ಮ ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಜಿಲ್ಲೆಗೆ ಬರೋ ಪ್ರವಾಸಿಗರ ಸಂಖ್ಯೆ ಕಡಿಮೆಯಾಗೋದ್ರ ಜೊತೆ ಜನಸಾಮಾನ್ಯರ ಆತಂಕವೂ ದೂರಾಗುತ್ತೆ ಅನ್ನೋದು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನಂಬಿಕೆಯಾಗಿದೆ.

Click to comment

Leave a Reply

Your email address will not be published. Required fields are marked *