ಹಲ್ಲೆಗೊಳಗಾದ್ರೂ ಪ್ರಿಯತಮನಿಗಾಗಿ ರಾತ್ರಿಯಿಡೀ ಮನೆ ಮುಂದೆ ಕೂತ ಪ್ರೇಯಸಿ

ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯತಮನ ಮನೆ ಮುಂದೆ ಯುವತಿಯೊಬ್ಬಳು ರಾತ್ರಿ ಇಡೀ ಕುಳಿತಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಕೆರೆ ಬಿಳಚಿ ಗ್ರಾಮದ ನಿವಾಸಿ ಅನಿಲ್ ಹಾಗೂ ಗ್ರಾಮದ ಪಕ್ಕದಲ್ಲಿರುವ ಸೋಮಲಾಪುರ ತಾಂಡದ ಯುವತಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಅನಿಲ್ ಟ್ರಾಕ್ಟರ್ ಡ್ರೈವಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು. ಯುವತಿ ಅಡಿಕೆ ಸುಲಿಯುವ ಕೆಲಸ ಮಾಡಲು ಸೋಮಲಾಪುರ ತಾಂಡದಿಂದ ಕೆರೆ ಬಿಳಚಿಗೆ ಬರುತ್ತಿದ್ದಳು.

- Advertisement -

ಆಗ ಇವರಿಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದೇ ರೀತಿ ಐದು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಅನಿಲ್ ಯುವತಿಯನ್ನು ದೂರ ಮಾಡಿದ್ದಾನೆ. ಆಗ ಯುವತಿ ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡು ಈಗ ದೂರ ಮಾಡುತ್ತಿದ್ದೀಯಾ ಎಂದು ಪಟ್ಟು ಹಿಡಿದು ಕೇಳಿದ್ದಾಳೆ. ಆಗ ಅನಿಲ್ ತಲೆಮರೆಸಿಕೊಂಡಿದ್ದಾನೆ.

- Advertisement -

ಇತ್ತ ಪ್ರಿಯಕರ ಕಾಣದ ಹಿನ್ನೆಲೆಯಲ್ಲಿ ಯುವತಿ ಆತನ ಮನೆಯ ಮುಂದೆ ಗೋಗರೆಯುತ್ತಿದ್ದಾಳೆ. ಇದನ್ನು ನೋಡಿದ ಯುವಕನ ಕುಟುಂಬಸ್ಥರು ಯುವತಿ ಹಾಗೂ ಆಕೆಯ ಜೊತೆ ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದರೂ ಯುವತಿ ಮಾತ್ರ ಪಟ್ಟು ಬಿಡದೇ ರಾತ್ರಿಯಿಡಿ ನ್ಯಾಯ ಸಿಗುವವರೆಗೂ ಮನೆ ಬಿಟ್ಟು ಹೋಗುವುದಿಲ್ಲ ಎಂದು ಮನೆಯ ಹೊರಗೆ ಕೂತಿದ್ದಾಳೆ.

ಅಲ್ಲದೆ ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿ, ಯುವಕನ ಜೊತೆ ಮದುವೆ ಮಾಡಿಸಿ ಎಂದು ಗೋಗರೆಯುತ್ತಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಸಂತೆಬೆನ್ನೂರು ಪೊಲೀಸರು ಭೇಟಿ ನೀಡಿದ್ದು, ಠಾಣೆಗೆ ಬಂದು ಯುವಕನ ಮೇಲೆ ದೂರು ನೀಡುವಂತೆ ಹೇಳಿ ಹೋಗಿದ್ದಾರೆ. ಆದರೆ ಯುವತಿ ಮಾತ್ರ ಅನಿಲ್ ಸಿಗುವವರೆಗೂ ಆತನ ಮನೆ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ.

- Advertisement -