Advertisements

ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್

ತೊಂಭತ್ತರ ದಶಕದಿಂದ ಮರೆಯಲಾರದ ಧಾರವಾಹಿಗಳನ್ನು ನೀಡಿ ಜನಮನ ಗೆದ್ದ ನಟ, ನಿರ್ದೇಶಕ, ನಿರ್ಮಾಪಕ ರವಿಕಿರಣ್ ಇಂದು ನಮ್ಮೊಂದಿಗೆ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ಬನ್ನಿ ಏನ್ ಹೇಳಿದ್ದಾರೆ ನೋಡೋಣ.

Advertisements

• ಸಿನಿಮಾಗಿಂತ ಸೀರಿಯಲ್ ಲೋಕ ನಿಮ್ಮನ್ನ ಅತಿಯಾಗಿ ಸೆಳೆಯಲು ಕಾರಣ?
1987ರಲ್ಲಿ ‘ನೋಡಿ ನಮ್ಮ ಸಿನಿಮಾ ಮೋಡಿ’ ಸೀರಿಯಲ್ ನಿಂದ ಕಿರುತೆರೆ ಜರ್ನಿ ಆರಂಭವಾಯಿತು. ಅದಕ್ಕೂ ಮೊದಲು ಅಂದ್ರೆ 1982ರಿಂದ 1987ರ ವರೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಸಿನಿಮಾಗಳಲ್ಲಿ ಬಿಗ್ ಹಿಟ್ ಕೊಟ್ರೆ ಮಾತ್ರ ಲೈಫ್ ಇಲ್ಲ ಅಂದ್ರೆ ಜನ ಹೀರೋಗಳನ್ನ ಮರೆತು ಬಿಡುತ್ತಾರೆ. ಜೊತೆಗೆ ಅವಕಾಶ ಇಲ್ಲದಾಗ ಸುಮ್ಮನೆ ಕೂರಬೇಕು. ಆದ್ರೆ ಸೀರಿಯಲ್‍ಗಳಲ್ಲಿ ಹಾಗಿಲ್ಲ. ಒಳ್ಳೆಯ ಕಂಟೆಂಟ್ ಕೊಟ್ರೆ ಯಾವತ್ತೂ ಜನ ಮರೆಯೋದಿಲ್ಲ. ಧಾರಾವಾಹಿಗಳಲ್ಲಿ ಯಾವಾಗಲೂ ಕೆಲಸ ಇರುತ್ತೆ. ಕ್ರಿಯೇಟಿವಿಟಿಗೆ ಸಮಯ ಇರುತ್ತೆ. ಇದೆಲ್ಲವನ್ನು ಆರಂಭದಿಂದಲೇ ತುಂಬಾ ಹತ್ತಿರದಿಂದ ಗಮನಿಸುತ್ತಾ ಬಂದಿದ್ದರಿಂದ ಮನಸ್ಸು ಧಾರಾವಾಹಿಯ ಕಡೆಗೆ ಹೊರಳುತ್ತಿತ್ತು.

Advertisements

• ಚಿತ್ರರಂಗಕ್ಕೂ ಬರುವುದಕ್ಕೂ ಮುನ್ನ ಏನು ಮಾಡುತ್ತಿದ್ರಿ?
ಮೊದಲು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದಾದ ನಂತರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕೆಲಸ ಮಾಡಿದೆ. ಇಲ್ಲಿರುವಾಗ ಶೂಟಿಂಗ್ ಸಂಬಂಧಪಟ್ಟ ಚಿಕ್ಕ ಪುಟ್ಟ ಕೆಲಸಗಳನ್ನು ನಾನು ಹತ್ತಿರದಿಂದಲೇ ನೋಡಿ ಕಲಿತುಕೊಂಡೆ. ಇಲ್ಲಿಯೇ ಕನ್ನಡದ ಸ್ಟಾರ್ ನಟರಾದ ಅಣ್ಣಾವ್ರು, ಅನಂತ್ ನಾಗ್, ದ್ವಾರಕೀಶ್, ವಿಷ್ಣುವರ್ಧನ್ ಇವರ ನಟನೆಯನ್ನು ನೋಡಲು ಸಾಧ್ಯವಾಯಿತು.

• ನಿಮ್ಮ ಕಾಲದ ಸೀರಿಯಲ್ ಹಾಗೂ ಈಗಿನ ಸೀರಿಯಲ್‍ಗಳಿಗಿರುವ ವ್ಯತ್ಯಾಸ ಏನು.?
ಕ್ರಿಯೇಟಿವಿಗೆ ಅವಕಾಶ ಆಗಲೂ ಇತ್ತು ಈಗಲೂ ಇದೆ. ಆದ್ರೆ ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸೋದು ಈಗ ಕಷ್ಟದ ಕೆಲಸ. 1996ರವರೆಗೆ ದೂರದರ್ಶನ ಒಂದೇ ಜನರಿಗೆ ಮನರಂಜನೆ ನೀಡುತ್ತಿದ್ದ ಮಾಧ್ಯಮ. ಆಗೆಲ್ಲ ವಾರಕ್ಕೆ ಒಂದು ಎಪಿಸೋಡ್ ಅಷ್ಟೇ ಟೆಲಿಕ್ಯಾಸ್ಟ್ ಆಗುತ್ತಿತ್ತು. ಜನ ಆ ಎಪಿಸೋಡ್‍ಗಾಗಿಯೇ ಕಾಯುತ್ತಿದ್ರು, ಸೀರಿಯಲ್ ಶುರುವಾಗ್ತಿದೆ ಅಂದ್ರೆ ಯಾರೂ ಮನೆಯಿಂದ ಆಚೆ ಬರ್ತಾನೆ ಇರ್ಲಿಲ್ಲ. ಈಗೆಲ್ಲ ಮೆಗಾ ಸೀರಿಯಲ್ ಕಾಲ. ಹಲವಾರು ಚಾನೆಲ್‍ಗಳಿವೆ. ಒಂದೇ ದಿನ ಹಲವು ಸೀರಿಯಲ್ ನೋಡಲು ಅವಕಾಶವಿದೆ. ಆದ್ರೆ ಜನ ಅಷ್ಟೇ ಬೇಗ ಅದನ್ನು ಮರೆತು ಬಿಡ್ತಾರೆ. ಲಾಂಗ್ ಲೈಪ್ ಈಗಿನ ಧಾರಾವಾಹಿಗಳಿಗೆ ಇಲ್ಲ.

Advertisements

• ಕಲಾವಿದನ ಜೀವನ ಆಯ್ಕೆ ಮಾಡಿಕೊಳ್ಳಲು ನಿಮಗೆ ಸ್ಪೂರ್ತಿ ಯಾರು?
ಕಲೆ ಅನ್ನೋದು ನನ್ನ ರಕ್ತದಲ್ಲೇ ಇತ್ತು. ತಾತನೇ ನನಗೆ ಸ್ಫೂರ್ತಿ. ನನ್ನ ತಾತ ಎಸ್.ವಿ.ರಂಗರಾವ್ ತಮಿಳು ಚಿತ್ರರಂಗದಲ್ಲಿ ದೊಡ್ಡ ನಟ. ಮನೆಯಲ್ಲಿಯೂ ಕಲೆಗೆ ಪೂರಕವಾದ ವಾತಾವರಣವಿತ್ತು. ತಾತನ ಜೊತೆ ಶೂಟಿಂಗ್, ಡಬ್ಬಿಂಗ್ ಎಲ್ಲ ಕಡೆಯೂ ನಾನು ಹೋಗುತ್ತಿದ್ದೆ. ದೊಡ್ಡ ದೊಡ್ಡ ಸ್ಟಾರ್ ನಟರನ್ನು, ಸ್ಟಾರ್ ಗಿರಿಯನ್ನು ಹತ್ತಿರದಿಂದ ನೋಡುತ್ತಿದ್ದೆ. ಇದೆಲ್ಲ ನನಗೆ ಕಲೆಯ ಕಡೆಯೇ ವಾಲುವಂತೆ ಮಾಡಿತು.

• ತಮಿಳು ಚಿತ್ರರಂಗ ಅತ್ಯಾಪ್ತವಾಗಿದ್ದರೂ ನೀವು ಕನ್ನಡದಲ್ಲಿಯೇ ನೆಲೆಯೂರಲು ಕಾರಣ?
ಹೌದು. ನನ್ನ ಮಾತೃಭಾಷೆ ತಮಿಳು, ತಾತಾ ತಮಿಳಿನ ಖ್ಯಾತ ನಟನಾಗಿದ್ದರಿಂದ ತಮಿಳು ಚಿತ್ರರಂಗ ಹತ್ತರದಿಂದ ಬಲ್ಲವನಾಗಿದ್ದೆ. ಆದ್ರೆ ತಂದೆ ಎಚ್‍ಎಎಲ್ ಉದ್ಯೋಗಿಯಾಗಿದ್ರು. ಬೆಂಗಳೂರಿನ ಎಚ್‍ಎಎಲ್‍ಗೆ ವರ್ಗಾವಣೆಯಾದ ಮೇಲೆ ನಾವೆಲ್ಲ ಬೆಂಗಳೂರಿಗೆ ಶಿಷ್ಟ್ ಆದ್ವಿ. ಇಲ್ಲಿನ ಸಂಸ್ಕೃತಿ, ಪರಿಸರದ ಜೊತೆ ಜೊತೆ ಬೆಳೆಯುತ್ತಾ ಕನ್ನಡ ಭಾಷೆ ಮೇಲೆ ಅಭಿಮಾನ ಹೆಚ್ಚಾಯಿತು. ಇಲ್ಲಿಯೇ ನೆಲೆಯೂರಲು ನಿರ್ಧರಿಸಿದೆ.

• ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದೀರಾ? ಹೇಗಿತ್ತು ಅನುಭವ?
ರಾಜಕೀಯ ಒಂದು ವಿಭಿನ್ನ ಅನುಭವ, ತುಂಬಾ ಖುಷಿ ಕೊಡ್ತು ನನಗೆ. ಕಿರುತೆರೆ ಹಿರಿತೆಯಲ್ಲಿ ಹೆಸರುವಾಸಿಯಾಗಿದ್ದರಿಂದ ಎಲ್ಲಾ ಕ್ಷೇತ್ರದಲ್ಲೂ ಆಟೋಮೆಟಿಕ್ ಅಗಿ ಅವಕಾಶ ಸಿಕ್ತು. ಜನ ನಮ್ಮನ್ನು ಗುರುತಿಸಿ ಕೈ ಮುಗಿದಾಗ ಆಗುವ ಖುಷಿ ಕೋಟಿ ಇದ್ರು ಸಿಗೋದಿಲ್ಲ. ರಾಜಕೀಯ ರಂಗ ಪ್ರವೇಶಿಸಿದಾಗ ಹಲವಾರು ಹೊಸ ವ್ಯಕ್ತಿಗಳ ಪರಿಚಯ ಆಯ್ತು. ಸಾರ್ವಜನಿಕ ಜೀವನ ಹೇಗಿರುತ್ತೆ ಅನ್ನೋದನ್ನ ಹತ್ತಿರದಿಂದ ನೋಡಲು ಸಾಧ್ಯವಾಯ್ತು. ಚುನಾವಣೆಯ ಹೈ ಫೀವರ್, ಜನರ ಜೊತೆಗಿನ ಸಂವಾದ ಇದೆಲ್ಲ ಹೊಸ ಅನುಭವವನ್ನು ನನಗೆ ನೀಡಿತು.

• ನಿರ್ದೇಶನ, ನಟನೆ, ನಿರ್ಮಾಣ, ಜವಾಬ್ದಾರಿಯುತ ಸ್ಥಾನ ಇವುಗಳನ್ನೆಲ್ಲ ಹೇಗೆ ನಿಭಾಯಿಸುತ್ತಿದ್ರಿ?
ಯಾವತ್ತೂ ಇದ್ಯಾವುದು ನನಗೆ ಹೊರೆ ಅನ್ನಿಸಲಿಲ್ಲ. ಎಲ್ಲವೂ ನನ್ನ ಕೆಲಸದ ಭಾಗವಾಗಿದ್ದರಿಂದ ಅದರ ಪಾಡಿಗೆ ಅದು ನಡೆಯುತ್ತಿತ್ತು. ಎಲ್ಲಾ ಜವಾಬ್ದಾರಿಯನ್ನು ಸುಲಲಿತವಾಗಿ ನಿಭಾಯಿಸಿಕೊಂಡಿದ್ದು ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ. ಜೊತೆಗೆ ನನ್ನ ಸ್ನೇಹಿತರು ಹಾಗೂ ಕುಟುಂಬದ ಸಹಕಾರ ಇದೆಲ್ಲವೂ ಸುಲಲಿತವಾಗಿ ಜವಾಬ್ದಾರಿ ನಿಭಾಯಿಸುವಂತೆ ಮಾಡಿತು.

• ನಿಮ್ಮ ಕನಸೇನು?
ಈ ಕ್ಷೇತ್ರದಲ್ಲಿ ತೃಪ್ತಿ ಅನ್ನೋದು ಇರೋದಿಲ್ಲ. ಖಾಲಿ ಕ್ಯಾಮೆರಾ ಪ್ರೇಮ್ ಮುಂದೆ ಎಲ್ಲವೂ ನಡೆಯುತ್ತೆ. ಎಲ್ಲವನ್ನೂ ನಾವು ಕ್ರಿಯೇಟ್ ಮಾಡಿಯೇ ಮಾಡೋದ್ರಿಂದ. ಪ್ರತಿನಿತ್ಯ ಹೊಸತನ್ನು ಮಾಡಬೇಕು, ಜನರಿಗೆ ಹೊಸತನವನ್ನು ತೋರಿಸಬೇಕು ಎಂಬ ತುಡಿತ ಇದೆ. ಕೊನೆವರೆಗೂ ಈ ಕ್ಷೇತ್ರದಲ್ಲಿಯೇ ಇದ್ದು ಹೊಸತನವನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಅನ್ನೋದೇ ನನ್ನ ದೊಡ್ಡ ಕನಸು.

• ನಿರ್ದೇಶಕ, ನಟನಾಗಿ ನವ ಕಲಾವಿದರಿಗೆ ನಿಮ್ಮ ಕಿವಿಮಾತು
ಡೆಡಿಕೇಶನ್, ಡಿಸಿಪ್ಲಿನ್ ಕಲಾವಿದರಿಗೆ ತುಂಬಾ ಮುಖ್ಯ. ನೀವು ನಿಮ್ಮ ಕಲೆಗೆ ಎಷ್ಟು ನ್ಯಾಯ ಒದಗಿಸುತ್ತಿರೋ ಅಷ್ಟೇ ಒಳ್ಳೆಯ ಸ್ಥಾನ ನಿಮ್ಮ ಜೀವನದಲ್ಲಿ ಸಿಗುತ್ತೆ. ನಿಮಗೆ ಸಿಕ್ಕ ಪಾತ್ರವನ್ನು ನಿಮ್ಮದೇ ಪ್ರಾಜೆಕ್ಟ್ ಎಂದು ತಿಳಿದು ನಟಿಸಬೇಕು. ಜನರ ಮನಸ್ಸನ್ನು ಗೆದ್ದರೆ ಮಾತ್ರ ಇಲ್ಲಿ ನೆಲೆಯೂರಲು ಸಾಧ್ಯ. ಆದ್ದರಿಂದ ತುಂಬಾ ನ್ಯಾಚುರಲ್ ಆಗಿ ನಟಿಸಬೇಕು. ಆಗ ಮಾತ್ರ ಯಶಸ್ಸು, ಸೆಲೆಬ್ರಿಟಿ ಲೈಫ್, ಸ್ಟೇಟಸ್ ಸಿಗುತ್ತೆ. ಜೊತೆಗೆ ಫಿಟ್ನೆಸ್ ಕಡೆಯೂ ಗಮನ ಕೊಡಬೇಕು.

• ಜೀವನದಲ್ಲಿ ಮರೆಯಲಾರದ ಘಟನೆ ಯಾವುದು?
‘ಅಸಾಧ್ಯ ಅಳಿಯ’ ಸೀರಿಯಲ್ ಮಾಡುವಾಗ ನಾನು ಸ್ತ್ರೀವೇಷ ಹಾಕಿದ್ದೆ. ಶೂಟಿಂಗ್ ಬ್ರೇಕ್ ಸಿಕ್ಕಾಗ ನಾನು ಗೇಟ್ ಬಳಿ ಹೋಗಿ ಸೀಗರೇಟ್ ಸೇದುತ್ತಾ ಇದ್ದೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಅಜ್ಜಿಯರು ನನ್ನನ್ನು ಹೆಣ್ಣು ಎಂದೇ ಭಾವಿಸಿ. ಹತ್ತಿರ ಬಂದು ನಾನು ಸೀಗರೆಟ್ ಸೇದುತಿದ್ದುದ್ದಕ್ಕೆ ಚೆನ್ನಾಗಿ ಬೈಯ್ದು ಹೋದ್ರು. ಆದ್ರೆ ಅವತು ಬೈದಿದ್ದಕ್ಕೆ ನಂಗೆ ಬೇಜಾರ್ ಆಗಲಿಲ್ಲ. ನಾನು ಸ್ತ್ರೀವೇಷ ಹಾಕಿದಕ್ಕೂ ಸಾರ್ಥಕವಾಯ್ತು ನಾನು ಹುಡುಗ ಅಂತ ಗೊತ್ತಾಗಲಿಲ್ಲ ಎಂದು ತುಂಬಾ ಖುಷಿಪಟ್ಟೆ.

• ಪುತ್ರ ಪ್ರೇಮ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.
ಹೌದು. ಮಗನಿಗೆ ಸಿನಿಮಾ ನಟನೆಯಲ್ಲಿ ಅಪಾರ ಆಸಕ್ತಿ. ನಟನೆಗೆ ಸಂಬಂಧ ಪಟ್ಟ ಕೋರ್ಸ್ ಮುಗಿಸಿಕೊಂಡಿದ್ದಾನೆ. ನಾನೇ ಕಥೆ ಬರೆದು ನಿರ್ದೇಶನ ನಿರ್ಮಾಣ ಮಾಡುತ್ತಿರುವ ಪರಿವರ್ತನೆ ಚಿತ್ರದಲ್ಲಿ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾನೆ. ಸೆನ್ಸಾರ್ ಕೂಡ ಆಗಿದ್ದು ಬಿಡುಗಡೆಗೆ ಪ್ಲ್ಯಾನ್ ಮಾಡುತ್ತಿದ್ದೇವೆ.

• ಇಷ್ಟು ವರ್ಷದ ಕಿರುತೆರೆ ಹಿರಿತೆರೆ ಪಯಣ ತೃಪ್ತಿ ಕೊಟ್ಟಿದ್ಯಾ?
ನನಗೆ ಖುಷಿ ಕೊಡೋ ಕ್ಷೇತ್ರದಲ್ಲಿ ಇಷ್ಟು ವರ್ಷ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಅಂದ್ರೆ ನಿಜಕ್ಕೂ ತೃಪ್ತಿ ಕೊಡೊ ವಿಚಾರ . ಒಮ್ಮೆ ನಾನು ನಡೆದು ಬಂದ ಹಾದಿ ನೋಡಿದ್ರೆ ತುಂಬಾ ಖುಷಿ ಹಾಗೂ ತೃಪ್ತಿ ಎರಡೂ ಸಿಕ್ಕುತ್ತೆ. ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸೋದು ಅಷ್ಟು ಸುಲಭದ ಕೆಲಸವಲ್ಲ. ಪ್ರತಿಯೊಬ್ಬ ವ್ಯಕ್ತಿ ಮುಂದೆ ಸಾಗಿದಾಗಒಮ್ಮೆ ಹಿಂದೆ ನೋಡಬೇಕು, ಹಂಡ್ರೆಂಡ್ ಪರ್ಸೆಂಟ್ ಹ್ಯಾಪಿ ನಾನು.

Advertisements
Exit mobile version