Connect with us

Cinema

ಸುಶಾಂತ್ ಸಿಂಗ್ ಕುರಿತು ಸಲ್ಮಾನ್ ಟ್ವೀಟ್- ನೆಟ್ಟಿಗರಿಂದ ಆಕ್ರೋಶ

Published

on

ನವದೆಹಲಿ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಕುರಿತು ಇನ್ನೂ ಚರ್ಚೆ ಮುಂದುವರಿದಿದ್ದು, ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದರಿಂದ ಬೇಸತ್ತು ಹಲವು ಬಾಲಿವುಡ್ ನಟ, ನಟಿಯರು ಸಾಮಾಜಿಕ ಜಾಲತಾಣಗಳನ್ನೇ ತೊರೆಯುವ ನಿರ್ಧಾರ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಸುಶಾಂತ್ ಸಾವು ಬಾಲಿವುಡ್‍ನಲ್ಲಿ ಪ್ರತಿಧ್ವನಿಸುತ್ತಿದೆ. ಸುಶಾಂತ್ ಸ್ಥಿತಿಗೆ ಹಲವು ನಟ ಹಾಗೂ ನಿರ್ಮಾಕರು ಕಾರಣ ಎಂದು ಆರೋಪಿಸಲಾಗಿದೆ. ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರೂ ಸೇರಿಕೊಂಡಿದೆ. ಇಷ್ಟೆಲ್ಲ ಚರ್ಚೆ ನಡೆಯುತ್ತಿರುವುದರ ಮಧ್ಯೆ ಸಲ್ಮಾನ್ ಖಾನ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಜೂನ್ 14ರಂದು ಸುಶಾಂತ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗಿನಿಂದ ಈ ಕುರಿತು ಬಾಲಿವುಡ್‍ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆತನ ಈ ಸ್ಥಿತಿಗೆ ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತವೇ ಕಾರಣ ಎಂದು ದೂರಲಾಗುತ್ತಿದೆ. ಅಲ್ಲದೆ ಕೆಲ ನಿರ್ಮಾಪಕರು, ನಟರಿಂದಲೇ ಪ್ರತಿಭಾನ್ವಿತ ಯುವ ನಟ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಹಲವು ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನೇ ಡಿಆ್ಯಕ್ಟಿವೇಟ್ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ವಕೀಲರೊಬ್ಬರು ಪ್ರಕರಣ ಸಹ ದಾಖಲಿಸಿದ್ದು, ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಇದೆಲ್ಲದರ ಮಧ್ಯೆ ಇದೀಗ ಭಾಯಿಜಾನ್ ಸಲ್ಮಾನ್ ಖಾನ್ ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ನನ್ನೆಲ್ಲ ಅಭಿಮಾನಿಗಳಲ್ಲಿ ವಿನಂತಿ, ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ನಿಲ್ಲಬೇಕು. ಭಾಷೆ ಅಥವಾ ಶಾಪಗಳ ಮೂಲಕ ಹೋಗಬಾರದು ಬದಲಿಗೆ ಅದರ ಹಿಂದಿರುವ ಭಾವನೆಯೊಂದಿಗೆ ಹೋಗಬೇಕು. ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವುದು ತುಂಬಾ ದುಃಖವನ್ನುಂಟು ಮಾಡುತ್ತದೆ. ಹೀಗಾಗಿ ಸುಶಾಂತ್ ಕುಟುಂಬ ಹಾಗೂ ಅಭಿಮಾನಿಗಳಿಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.

ಅವರ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿದ್ದು, ತಪ್ಪೊಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಭಾಯ್ ಎಂದು ಹೇಳಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಟೆರರ್ ಅಟ್ಯಾಕ್ ಬಳಿಕ ಐಸಿಸ್‍ನವರು ಘಟನೆಯ ಜವಾಬ್ದಾರಿ ಹೊತ್ತುಕೊಂಡಂತೆ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ ಎಂದಿದ್ದಾರೆ. ಗುಡ್ ಆ್ಯಕ್ಟಿಂಗ್ ಸರ್ ಎಂದು ಕೆಲವರು ಹೇಳಿದ್ದಾರೆ. ಅಲ್ಲದೆ ಇನ್ನೂ ಕೆಲವರು ಅಂತಹ ಪ್ರೊಡಕ್ಷನ್ ಕಂಪನಿಗಳನ್ನು ಬೈಕಾಟ್ ಮಾಡಿ ಎಂದು ಹೇಳಿದ್ದಾರೆ. ಹೀಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *