ಬೆಂಗಳೂರು: ಸರ್ಕಾರ ಮೂರು ತಿಂಗಳ ಕಾಲಹರಣ ಮಾಡಿದ್ದು, ಬಜೆಟ್ ನಲ್ಲಿ ಆರನೇ ವೇತನ ಆಯೋಗ ಜಾರಿಗೆ ಹಣ ಮೀಸಲಿಡಬೇಕು ಎಂದು ಸಾರಿಗೆ ನೌಕರರ ಮುಂದಾಳು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೊಟ್ಟ ಮಾತು ಮರೆತಿರುವ ಸರ್ಕಾರಕ್ಕೆ ನೆನೆಪಿಸುವ ಕೆಲಸ ಇವತ್ತು ಆಗಲಿದೆ. ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬುದರ ಕೇಳಲು ಈ ಸತ್ಯಾಗ್ರಹ ನಡೆಸಲಾಗುತ್ತಿದೆ. ಬಜೆಟ್ ನಲ್ಲಿ ಆರನೇ ವೇತನ ಆಯೋಗಕ್ಕೆ ಹಣವನ್ನ ಮೀಸಲಿಡಬೇಕಿದೆ. ಮೂರು ಕಾಸಿಗೆ ದುಡಿಯುವ ಜನರನ್ನ ದುಡಿಸಿಕೊಳ್ಳಬಾರದು. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಬಜೆಟ್ ನಲ್ಲಿ ಏನು ಮಾಡಬೇಕು? ನಷ್ಟ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮುಂದಾಗಬೇಕಿದೆ ಎಂದರು.
Advertisement
Advertisement
ಮಾರ್ಚ್ 15ಕ್ಕೆ ನೀಡಿದ ಗಡುವು ಮುಗಿಯಲಿದೆ. ನಷ್ಟದಲ್ಲಿರುವ ಸಾರಿಗೆ ಇಲಾಖೆಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ದಿಟ್ಟ ನಿರ್ಧಾರಕ್ಕೆ ಬರಬೇಕಿದೆ. ಸಾರಿಗೆ ಇಲಾಖೆಗೆ ಬಜೆಟ್ ನಲ್ಲಿ ವಿಶೇಷ ಹಂಚಿಕೆ ಅನಿವಾರ್ಯ ಎಂಬ ವಿಷಯವನ್ನು ನೆನಪಿಸಲು ಇಂದು ಮುಂದಾಗುತ್ತಿದ್ದೇವೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ರೆ ನಮ್ಮ ಗಡುವು ಮುಗಿದ ಕೂಡಲೇ ಸರ್ಕಾರದವರು ಮಾತಿಗೆ ತಪ್ಪಿದ ಮಕ್ಕಳು ಅಂತ ಹೇಳಿ ನಮ್ಮ ಹೋರಾಟವನ್ನ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.