ಬಳ್ಳಾರಿ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜಿಲ್ಲೆಯ ಸಂಡೂರು ತಾಲೂಕಿನ ದೇವಲಾಪುರ- ಕುರೇಕುಪ್ಪ ಗ್ರಾಮದ ಸಮೀಪದ ಬಾವಾರ ಕಾಲುವೆ ಬಳಿಯ ಗುಡ್ಡದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ.
Advertisement
ಸಂಡೂರು, ಕೂಡ್ಲಿಗಿ ಹಾಗೂ ಕಂಪ್ಲಿಯ ತಾಲೂಕಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳು ಹೆಚ್ಚಾಗಿದ್ದು, ಉಭಯ ಗ್ರಾಮಗಳ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಸಾರ್ವಜನಿಕರು ಓಡಾಡುವ ಹಾದಿಯಲ್ಲೇ ಈ ಚಿರತೆಗಳು ಕಾಣಸಿಗುತ್ತವೆ. ಈ ದಿನ ಗುಡ್ಡಗಾಡು ಪ್ರದೇಶವೊಂದರಲ್ಲಿನ ದೊಡ್ಡದಾದ ಕಲ್ಲು ಬಂಡೆಯ ಮೇಲೆ ಕುಳಿತುಕೊಂಡೇ ದಿಟ್ಟಿಸಿ ನೋಡುತ್ತಿರುವ ವೀಡಿಯೋ ತುಣುಕೊಂದನ್ನು ದೇವಲಾಪುರ ಗ್ರಾಮದ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
Advertisement
ಈ ಗ್ರಾಮಗಳ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರಿಗೆ ಚಿರತೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರ ವರ್ಗದವರ ಗಮನ ಸೆಳೆದರೂ ಕೂಡ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಪ್ರಾಣವನ್ನು ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.