Bengaluru CityDistrictsKarnatakaLatestMain Post

ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ, ಜುಲೈ 6ರವರೆಗೆ 11 ಲಕ್ಷ ಸಸಿ ನೆಡಲು ಯೋಜನೆ: ರವಿಕುಮಾರ್

ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಲು ಭದ್ರ ನೆಲೆಯನ್ನು ಒದಗಿಸಿಕೊಟ್ಟ ಮತ್ತು ಸಿದ್ಧಾಂತದ ಆಧಾರ ಒದಗಿಸಿದ ಹಾಗೂ ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳು ಭಾರತದಲ್ಲೇ ಉಳಿಯಲು ಕಾರಣಕರ್ತರಾದ ಮಹಾನ್ ಚಿಂತಕರಾದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನವನ್ನು ನಾಳೆ ಆಚರಿಸಲಾಗುವುದು. 300 ವೆಬೆಕ್ಸ್ ವಿಚಾರಸಂಕಿರಣಗಳನ್ನು ಹಮ್ಮಿಕೊಂಡು ಅವರ ವಿಚಾರಧಾರೆ, ಜೀವನ ಮತ್ತು ಸಾಧನೆ ಕುರಿತು ತಿಳಿಸಿಕೊಡಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಹೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 23ರಿಂದ ಡಾಕ್ಟರ್ ಮುಖರ್ಜಿ ಅವರ ಜನ್ಮದಿನವಾದ ಜುಲೈ 6ರವರೆಗೆ 11 ಲಕ್ಷ ಸಸಿ ನೆಡಲು ಯೋಜಿಸಲಾಗಿದೆ ಎಂದರು.ಜೂನ್ 27ರಂದು ಪ್ರಧಾನಿಯವರ ಸಾಮಾಜಿಕ ಚಿಂತನೆಯ ಮನ್ ಕಿ ಬಾತ್ ಮಾತುಗಳನ್ನು ರಾಜ್ಯದ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಕೇಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

ಕೋವಿಡ್ ಲಸಿಕೆ ನೀಡುವ ವಿಷಯದಲ್ಲಿ ಕರ್ನಾಟಕವು ಐತಿಹಾಸಿಕ ಸಾಧನೆ ಮಾಡಿದೆ. ಅತಿ ಹೆಚ್ಚು ಲಸಿಕೆ ನೀಡಿದ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಭಾರತವು ನಿನ್ನೆ 83 ಲಕ್ಷ ಜನರಿಗೆ ಲಸಿಕೆ ನೀಡಿದೆ ಎಂದ ಅವರು, ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಸಮರ್ಪಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಈ ಹಿಂದೆ ಲಸಿಕೆಯನ್ನು ಟೀಕಿಸಿದ್ದರು ಎಂದು ನೆನಪಿಸಿದರು. ಕೊರೋನಾ ಮುಕ್ತ ಮತ್ತು ಲಸಿಕೆಯುಕ್ತ ಬೂತ್ ನಿರ್ಮಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.

ಬಡವರ ಮನೆಗಳನ್ನು ಗುರುತಿಸಿ ಆಹಾರ ಪೊಟ್ಟಣ ನೀಡುವುದು, ಅಪಘಾತ ವಿಮೆ, ಜೀವವಿಮೆ ಮಾಡಿಸಿಕೊಡುವುದು, ಪಡಿತರ ಚೀಟಿ ಮಾಡಿಸಿ ಕೊಡುವ ಆಂದೋಲನವೂ ನಡೆಯುತ್ತಿದೆ. ವಯಸ್ಸಾದವರು, ಕೊರೊನಾ ಸೋಂಕಿಗೆ ಒಳಗಾದವರು ಮತ್ತು ಅಸಹಾಯಕರಿಗೆ ನೆರವಾಗಲು ಆರೋಗ್ಯ ಸ್ವಯಂಸೇವಕರು ಮುಂದಾಗಲಿದ್ದಾರೆ. ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಕಿಟ್ ಇಟ್ಟುಕೊಂಡು ತಪಾಸಣೆ ಮಾಡುವ ಕೆಲಸವನ್ನು ಈ ಸ್ವಯಂಸೇವಕರು ಮಾಡಲಿದ್ದಾರೆ. ರಾಜ್ಯದ ಎಲ್ಲಾ ಒಂದೂಕಾಲು ಕೋಟಿ ಕುಟುಂಬಗಳನ್ನೂ ತಲುಪುವ ಗುರಿ ಇದೆ. ಇದೊಂದು ದೊಡ್ಡ ಅಭಿಯಾನ ಎಂದು ವಿವರಿಸಿದರು.

ಇನ್ನು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ಜೂನ್ 26ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ. ಪದಾಧಿಕಾರಿಗಳು ರಾಜ್ಯದ ಸಭೆಯಲ್ಲಿ ಭಾಗವಹಿಸುವರು. ಉಳಿದವರು ಜಿಲ್ಲಾ ಕೇಂದ್ರಗಳಿಂದ ಜೋಡಣೆ ಆಗಲಿದ್ದು, ಇದೊಂದು ಹೈಬ್ರಿಡ್ ಸಭೆ ಆಗಲಿದೆ. ರಾಜ್ಯದ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ವೆಬೆಕ್ಸ್ ಮೂಲಕ ಸಭೆಯಲ್ಲಿ ಭಾಗವಹಿಸುವರು. ಮುಖ್ಯಮಂತ್ರಿಗಳಾದ  ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಕೇಂದ್ರದ ಸಚಿವರು ಭಾಗವಹಿಸಲಿದ್ದಾರೆ. ಇದೇ 25ರಂದು ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ತಿಳಿಸಿದರು.

ಕೋವಿಡ್ ಸಮರ್ಥ ನಿರ್ವಹಣೆ, ವೈದ್ಯಕೀಯ ಕ್ಷೇತ್ರದಲ್ಲಿನ ದೇಶದ ಸಾಧನೆ ಕುರಿತು ಕಾರ್ಯಕರ್ತರಿಗೆ ತಿಳಿಸಲಾಗುವುದು. ಜೂನ್- ಜುಲೈಯಲ್ಲಿ 6 ವಿಷಯಗಳ ಕುರಿತು ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ಏರ್ಪಡಿಸಲಾಗುವುದು. ನರೇಂದ್ರ ಮೋದಿ ಸರಕಾರದ ಏಳು ವರ್ಷಗಳ ಸಾಧನೆ, ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತದ ಸಾಧನೆ, ಆತ್ಮನಿರ್ಭರ ಭಾರತ, ಕೃಷಿ ಸುಧಾರಣೆ ಕಾಯ್ದೆ ಮತ್ತು ಸಾಧನೆಗಳು, ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಚಿಂತನೆಗಳು ಮತ್ತು ಜೀವನ ಸಾಧನೆ ಹಾಗೂ ಬಡವರಿಗಾಗಿ ಆರಂಭಿಸಿದ ಯೋಜನೆಗಳ ಕುರಿತು ಪ್ರಶಿಕ್ಷಣ ನಡೆಯಲಿದೆ ಎಂದರು.

Leave a Reply

Your email address will not be published. Required fields are marked *

Back to top button