ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ

ಚಿಕ್ಕಮಗಳೂರು: ವೈದ್ಯ ಹಾಗೂ ನರ್ಸ್ ಕಾವಲಿನ ಮಧ್ಯೆ ಕೊರೊನಾ ಸೋಂಕಿತ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ.

- Advertisement -

ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿಗೆ ಬುಧವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಡಳಿತ ವಿದ್ಯಾರ್ಥಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿಗೆ ಕೊರೊನಾ ಲಕ್ಷಣಗಳು ತೀರಾ ಕಡಿಮೆ ಇದ್ದ ಕಾರಣ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರಲಾಗಿದೆ.

ಮೂಡಿಗೆರೆ ತಾಲೂಕಿನ ಹಳ್ಳಿಯಿಂದ ಪ್ರತ್ಯೇಕ ಅಂಬುಲೆನ್ಸ್ ನಲ್ಲಿ ಓರ್ವ ನರ್ಸ್ ಜೊತೆ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಚಿಕ್ಕಮಗಳೂರು ನಗರದ ಮಧುವನ ಲೇ ಔಟ್‍ನಲ್ಲಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಸೆಂಟರ್‍ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ಆತನ ಜೊತೆ ಓರ್ವ ವೈದ್ಯ ಹಾಗೂ ನರ್ಸ್ ಕೂಡ ಇದ್ದರು.

- Advertisement -

ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಅಂಬುಲೆನ್ಸ್ ನಲ್ಲಿ ಮೂಡಿಗೆರೆ ತಾಲೂಕಿನ ಹಳ್ಳಿಯಲ್ಲಿನ ಆತನ ಮನೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗೆ ನಾಳೆಯೂ ಪರೀಕ್ಷೆ ಇದ್ದು, ನಾಳೆಯೂ ಇದೇ ರೀತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ವೈದ್ಯ ಹಾಗೂ ನರ್ಸ್ ತೀವ್ರ ನಿಗಾ ವಹಿಸಿಸಿದ್ದರು ಎಂದು ಡಿಡಿಪಿಯು ನಾಗರಾಜ್ ಮಾಹಿತಿ ನೀಡಿದ್ದಾರೆ.

- Advertisement -