ಕೋಲಾರ: ದಾಂದಲೆ ಬಳಿಕ ಪ್ರತಿಷ್ಠಿತ ಐಫೋನ್ ತಯಾರಿಕಾ ವಿಸ್ಟ್ರಾನ್ ಕಂಪನಿಯಲ್ಲಿ ಹೊಸದೊಂದು ಬೆಳೆವಣಿಗೆ ಆರಂಭವಾಗಿದೆ. ಕಾರ್ಮಿಕರಿಗೆ ಬಾಕಿ ಇದ್ದ ವೇತನ ಪಾವತಿ ಮಾಡಿರುವ ಕಂಪನಿ, ಮರು ನೇಮಕಾತಿ ಪ್ರಕ್ರಿಯೆಯನ್ನು ಸಹ ಶುರುಮಾಡಿದೆ. ಆದರೆ ಇಲ್ಲಿ ಕೆಲಸ ಮಾಡುವವರಿಗೆ ಕೆಲ ಮಾನದಂಡಗಳನ್ನ ವಿಧಿಸಿದೆ.
Advertisement
ಡಿಸೆಂಬರ್ 12 ರಂದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ತಯಾರಿಕಾ ಬಹುರಾಷ್ಟ್ರೀಯ ಕಂಪನಿ ವಿಸ್ಟ್ರಾನ್ ನಲ್ಲಿ ಕಾರ್ಮಿಕರು ದಾಂದಲೆ ನಡೆಸಿ, ಪೀಠೋಪಕರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದರು. ವೇತನ ಸರಿಯಾಗಿ ನೀಡಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರ ಆಕ್ರೋಶಕ್ಕೆ ಸಿಕ್ಕ ಕಂಪನಿ ಅಸ್ತಿ ಪಂಜರದಂತಾಗಿತ್ತು. ಇದಾದ ನಂತರ ಹಲವು ತನಿಖೆ, ಪರಿಶೀಲನೆ ಬಳಿಕ ಕಂಪನಿ ಕಾರ್ಮಿಕರ ಕ್ಷಮೆ ಕೇಳಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಇದೇ ವೇಳೆ ವಿಸ್ಟ್ರಾನ್ ಕಂಪನಿ ಮತ್ತೆ ಇಲ್ಲಿ ಕಾರ್ಯಾರಂಭ ಮಾಡೋದು ಅನುಮಾನ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೆಲ್ಲದಕ್ಕೂ ತೆರೆ ಎಳೆದಿರುವ ಕಂಪನಿ, ಈಗಾಗಲೇ ಕಾರ್ಮಿಕರ ಬಾಕಿ ಇದ್ದ ವೇತನ ಪಾವತಿ ಮಾಡಿದೆ. ಜೊತೆಗೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಪಡೆಯಬೇಕೆಂದರೆ ಪೊಲೀಸ್ ಇಲಾಖೆಯ ಅನುಮತಿ ಖಡ್ಡಾಯವಾಗಿದೆ.
Advertisement
Advertisement
ಈ ಬಾರಿ ಕಂಪನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೂ ಪಶ್ಚಾತ್ತಾಪವಾಗಿದೆ. ಕೆಲಸ ನೀಡಲು ಬಂದ ಕಂಪನಿ ಮೇಲೆ ದಾಂದಲೆ ಮಾಡಿದ್ದು ತಪ್ಪು ಅನ್ನೋದು ಅರಿವಾಗಿದೆ. ಹೀಗಾಗಿ ವಿಸ್ಟ್ರಾನ್ ಕಂಪನಿ ಈಗ ಮತ್ತೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರಿಗೆ ಮೊಬೈಲ್ ಮೆಸೇಜ್ ಮಾಡಿ ಕೆಲವು ನಿಗದಿತ ದಾಖಲಾತಿಗಳನ್ನು ನೀಡಿ ಕೆಲಸಕ್ಕೆ ಸೇರಿಕೊಳ್ಳಲು ಸೂಚನೆ ನೀಡಿದೆ.
Advertisement
ಕಂಪನಿಯಿಂದ ಕಾರ್ಮಿಕರಿಗೆ ಸಂದೇಶ ಕಳುಹಿಸಲಾಗಿದ್ದು, ಗುರುತಿನ ದಾಖಲೆ ಸಹಿತ ಅಭ್ಯರ್ಥಿ ವಾಸಿಸುವ ಗ್ರಾಮದ ಇಬ್ಬರು ಸಾಕ್ಷಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ಮೂರು ಫೋಟೋ. ಸೇವಾಸಿಂಧು ಅಥವಾ ಕಂಪನಿಯ ಆಪ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇಷ್ಟು ದಾಖಲಾತಿಗಳೊಂದಿಗೆ ಪೊಲೀಸ್ ಠಾಣೆಯಲ್ಲಿ ಪಡೆಯುವ ನಿರಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಕಂಪನಿಯಲ್ಲಿ ಉದ್ಯೋಗ ಸಿಗಲಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಶುರುವಾಗಿದೆ. ಮತ್ತೆ ವಿಸ್ಟ್ರಾನ್ ಕಂಪನಿ ಆರಂಭದ ಆಸೆ ಚಿಗುರಿದೆ.
ಕೆಲಸ ಕಳೆದುಕೊಂಡಿದ್ದ ಸಾವಿರಾರು ಉದ್ಯೋಗಿಗಳು ತಿಂಗಳಿಂದ ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದರು. ಈಗ ಮತ್ತೆ ಕಂಪನಿ ಆರಂಭವಾಗುತ್ತಿದ್ದು, ಮತ್ತೆ ಕೆಲಸ ಸಿಗುತ್ತದೆ ಎಂದು ಸಾವಿರಾರು ಕಾರ್ಮಿಕರಲ್ಲಿ ಸಂತೋಷ ಮೂಡಿದೆ.