Connect with us

Cinema

ಲಾಕ್‍ಡೌನ್‍ನಿಂದ ನಟ ಆತ್ಮಹತ್ಯೆ – ಪತ್ನಿ ಊಟ ಮಾಡ್ತಿದ್ದಾಗಲೇ ನೇಣಿಗೆ ಶರಣು

Published

on

– ಇತ್ತೀಚೆಗಷ್ಟೆ ಮದುವೆಯಾಗಿದ್ದ ನಟ

ಮುಂಬೈ: ‘ಆದಾತ್ ಸೆ ಮಜ್ಬೂರ್’ ಶೋ ಖ್ಯಾತಿಯ ಬಾಲಿವುಡ್‍ ನಟ ಮನ್‍ಮೀತ್ ಗ್ರೆವಾಲ್ (32) ತಮ್ಮ ಖಾರ್ಗರ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನ್‍ಮೀತ್ ಲಾಕ್‍ಡೌನ್‍ನಿಂದ ಕೆಲಸವಿಲ್ಲದ ಕಾರಣ ಒತ್ತಡದಲ್ಲಿದ್ದರು ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

‘ಆದಾತ್ ಸೆ ಮಜ್ಬೂರ್’ ಮತ್ತು ‘ಕುಲದೀಪಕ್’ ಮುಂತಾದ ಧಾರಾವಾಹಿಗಳಲ್ಲಿ ನಟ ಮನ್‍ಮೀತ್ ಅಭಿನಯಿಸಿದ್ದರು. ಲಾಕ್‍ಡೌನ್‍ನಿಂದ ಅನೇಕ ಪ್ರಾಜೆಕ್ಟ್‌ಗಳು ಸ್ಥಗಿತಗೊಂಡಿವೆ. ಹೀಗಾಗಿ ಕೆಲಸವಿಲ್ಲದೆ ಮಾನಸಿಕವಾಗಿ ಬಳಲುತ್ತಿದ್ದರು. ಜೊತೆಗೆ ಆರ್ಥಿಕ ಸಮಸ್ಯೆ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 15 ರಂದು ರಾತ್ರಿ ಸುಮಾರು 9.30ಕ್ಕೆ ತನ್ನ ಫ್ಲ್ಯಾಟ್‍ನಲ್ಲಿ ಮನ್‍ಮೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೂಲ ಹೆಸರು ಅಮರ್‌ಜ್ಯೋತ್ ಸಿಂಗ್, ಇತ್ತೀಚೆಗೆ ರವೀಂದ್ರ ಕೌರ್ ಅವರನ್ನು ವಿವಾಹವಾಗಿದ್ದರು. ಇವರ ಕುಟುಂಬ ಪಂಜಾಬ್‍ನಲ್ಲಿ ನೆಲೆಸಿದೆ. ಪತ್ನಿ ಅಡುಗೆಮನೆಯಲ್ಲಿ ಊಟ ಮಾಡುತ್ತಿದ್ದಾಗ ಬೆಡ್‍ರೂಮಿಗೆ ಹೋಗಿ ದುಪ್ಪಟ್ಟದಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕುರ್ಚಿ ಬೀಳುವ ಶಬ್ದ ಕೇಳಿದಾಗ ಪತ್ನಿ ರೂಮಿಗೆ ಹೋಗಿ ನೋಡಿದಾಗ ಪತಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದನ್ನು ನೋಡಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಅಜಿತ್ ಕಾಂಬ್ಲೆ ತಿಳಿಸಿದ್ದಾರೆ.

ಮನ್‍ಮೀತ್‍ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಾರಿ ಮಧ್ಯೆಯೇ ನಟ ಮೃತಪಟ್ಟಿದ್ದರು. ವೆಬ್ ಸರಣಿಗಳು ಮತ್ತು ಕೆಲವು ಜಾಹೀರಾತುಗಳು ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳು ಸ್ಥಗಿತಗೊಂಡಿದ್ದರಿಂದ ಕಳೆದ ಕೆಲವು ದಿನಗಳಿಂದ ಪತಿ ತೀವ್ರ ಒತ್ತಡದಲ್ಲಿದ್ದರು ಎಂದು ಕೌರ್ ಪೊಲೀಸರಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಮನ್‍ಮೀತ್ ವಿದೇಶಕ್ಕೆ ಹೋಗುವ ಬಗ್ಗೆ ಪತ್ನಿ ಜೊತೆ ಮಾತನಾಡಿದ್ದು, ಈ ಲಾಕ್‍ಡೌನ್ ಎಲ್ಲವನ್ನು ಹಾಳು ಮಾಡಿತು ಎಂದಿದ್ದರಂತೆ. ಮನ್‍ಮೀತ್ ಕೆಲವರ ಬಳಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲಾಗುವುದಿಲ್ಲ ಎಂದು ಪತ್ನಿ ಬಳಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *